ಬಂಕ್ ಪಕ್ಕದಲ್ಲಿ ಮನೆ ಇದ್ರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ – ಸವಾರರ ವಿರೋಧ

ಬೆಂಗಳೂರು: ಅಪಘಾತದಲ್ಲಿ ಸಾವನ್ನಪ್ಪುವ ಸವಾರರ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು “ನೋ ಹೆಲ್ಮೆಟ್ ನೋ ಪೆಟ್ರೋಲ್” ಎಂಬ ಬೆಂಗಳೂರು ಸಂಚಾರಿ ಪೊಲೀಸರ ಹೊಸ ನಿಯಮಕ್ಕೆ ದ್ವಿಚಕ್ರ ವಾಹನ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ನಿಯಮ ಒಳ್ಳೆಯದು. ಆದರೆ ಮೊದಲು ಪೊಲೀಸರು ಅವರು ಕೆಲಸವನ್ನು ಅವರು ಸರಿಯಾಗಿ ಮಾಡಲಿ. ಬಂಕ್ ಪಕ್ಕದಲ್ಲಿ ಮನೆ ಇದ್ದರೂ ಹೆಲ್ಮೆಟ್ ಹಾಕಿಕೊಂಡು ಬರಬೇಕೇ ಎಂದು ಪ್ರಶ್ನಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಹೊಸ ನಿಯಮ ನಾಳೆಯಿಂದ ಜಾರಿಯಾಗುವ ಸಾಧ್ಯತೆ ಇದೆ. ಆದರೆ ಈ ವಿಚಾರವಾಗಿ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಸಂಚಾರಿ ಪೊಲೀಸರು ಇನ್ನೂ ಚರ್ಚಿಸಿಲ್ಲ ಎನ್ನಲಾಗಿದೆ. ಅದ್ದರಿಂದ ಪೆಟ್ರೋಲ್ ಬಂಕ್ ಮಾಲೀಕರು ಈ ಹೊಸ ನಿಯಮಕ್ಕೆ ಕ್ಯಾರೆ ಎನ್ನುತ್ತಿಲ್ಲ. ಮಾಲೀಕರು ಸೂಚನೆ ನೀಡದೇ ಇರುವ ಕಾರಣ ನಗರದ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಇಲ್ಲದಿದ್ದರೂ ಪೆಟ್ರೋಲ್ ಹಾಕುವ ಸಾಧ್ಯತೆ ಹೆಚ್ಚಿದೆ.

ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಪಿ.ಹರಿಶೇಖರನ್ ಹೊಸ ನಿಯಮ ಜಾರಿ ಸಂಬಂಧ ಸಹಕಾರ ಕೋರಿ ಇಂಧನ ಕಂಪನಿಗಳ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರ ಕಡೆಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎನ್ನಲಾಗಿದೆ. ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಈ ನಿಯಮ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ.

Comments

Leave a Reply

Your email address will not be published. Required fields are marked *