ಬೆಂಗಳೂರು: ಕಳ್ಳ ಮತ್ತು ಕಳ್ಳನನ್ನು ಹಿಡಿಯಲು ಹೋದ ವ್ಯಕ್ತಿ ಪರಸ್ಪರ ಚಾಕುವಿನಿಂದ ಇರಿದುಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರದ ನಿವಾಸಿ ವಾಟರ್ ಬಸವರಾಜ್ ಎಂಬವರ ಮನೆಯಲ್ಲಿ 500 ಗ್ರಾಂ ಚಿನ್ನ, 50 ಸಾವಿರ ರೂ. ನಗದು ಕಳವುಗೈದು ಕಳ್ಳ ಎಸ್ಕೇಪ್ ಆಗುತ್ತಿದ್ದನು. ಇದನ್ನು ಗಮನಿಸಿದ ಮುನಿರಾಜ್ ಎಂಬವರು ಕಳ್ಳನನ್ನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಮುನಿರಾಜ್ ಮತ್ತು ಕಳ್ಳ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ.

ಕಳ್ಳತನ ಮಾಡಿ ಮನೆಯ ಹಿಂಭಾಗದ ನೀಲಗಿರಿ ತೋಪಿನಲ್ಲಿ ಓಡುತ್ತಿದ್ದ ಕಳ್ಳನನ್ನು ಗಮನಿಸಿದ ಮುನಿರಾಜ್, ಮನೆಯಲ್ಲಿದ್ದ ಚಾಕುವಿನೊಂದಿಗೆ ಕಳ್ಳನನ್ನು ಹಿಂಬಾಲಿಸಿ ಹಿಡಿದುಕೊಂಡಿದ್ದಾರೆ. ಈ ವೇಳೆ ಕಳ್ಳನೇ ಮುನಿರಾಜ್ಗೆ ಇರಿದಿದ್ದಾನೆ. ಆಗ ತನ್ನ ಬಳಿಯಿದ್ದ ಚಾಕುವಿನಿಂದ ಮುನಿರಾಜ್ ಕೂಡ ಕಳ್ಳನಿಗೆ ಇರಿದಿದ್ದಾರೆ.
ಈ ಘಟನೆಯಲ್ಲಿ ಇಬ್ಬರಿಗೂ ತೀವ್ರವಾಗಿ ಗಾಯವಾಗಿ ರಕ್ತಸ್ರಾವ ಆದ ಕಾರಣ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳು ಹತ್ತಿರದ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply