ಸಾವಿರಾರು ಜನ್ರಿಗೆ ದಾರಿಯಾಗಿದ್ದ ನಂದಾದೀಪ ಆರೋಯ್ತು- ಹೆಚ್‍ಡಿಡಿ ಸಂತಾಪ

ಬೆಂಗಳೂರು: ಸಾವಿರಾರು ಜನರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ ಆರಿಹೋದ ಸುದ್ದಿಯನ್ನು ನಮಗೆಲ್ಲರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಉದ್ಯಮಿ ಸಿದ್ಧಾರ್ಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸಿದ್ಧಾರ್ಥ್ ಅವರದ್ದು ತುಂಬಾ ಸರಳ ವ್ಯಕ್ತಿತ್ವ. ನಿಜಕ್ಕೂ ಅವರ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಇಡೀ ದೇಶಕ್ಕೆ ಕಗ್ಗತ್ತಲಾವರಿಸಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು 35 ವರ್ಷಗಳಿಂದ ನಾನು ಸಿದ್ದಾರ್ಥ್ ಅವರನ್ನು ಬಲ್ಲೆ. ಈ ದಿನ ಆ ಸಜ್ಜನ ವ್ಯಕ್ತಿ ಇಲ್ಲವೆಂದರೆ ನನಗೆ ನಂಬಲಸಾಧ್ಯ. ಅವರ ಈ ದಾರುಣ ಸಾವಿನ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಲಿ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಹಾಗೂ ನಾಡಿನ ಅಸಂಖ್ಯಾತ ಕಾರ್ಮಿಕ ಬಂಧುಗಳಿಗೆ, ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ಸಿದ್ಧಾರ್ಥ್ ಮೃತದೇಹ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ದೊರಕಿದೆ. ಬೆಳಗ್ಗೆ 6.30ರ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ನದಿಯಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಅನುಮಾನದಿಂದ ದೋಣಿ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

Comments

Leave a Reply

Your email address will not be published. Required fields are marked *