ಬೆವರು ಸುರಿಸಿ ದುಡಿದ ಹಣಕ್ಕೆ ಪೂಜೆ, ಅಕ್ರಮ ಎಸಗಿಲ್ಲ: 15 ವರ್ಷದಲ್ಲಿ ಶ್ರೀಮಂತರಾಗಿದ್ದನ್ನು ವಿವರಿಸಿದ ಸುರೇಶ್

ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ಪ್ರತಿವರ್ಷ ನಾವು ತೆರಿಗೆ ಕಟ್ಟಿಕೊಂಡು ಬಂದಿದ್ದೇನೆ. ನಾನು ಮೋಸ ಮಾಡಿದ್ದರೆ ಯಾರೂ ಬೇಕಾದರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು ಎಂದು ಗುತ್ತಿಗೆಗೆದಾರರಾಗಿರುವ ಸುರೇಶ್ ಅವರು ತಿಳಿಸಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕಳೆದ 10 ವರ್ಷಗಳಿಂದ ನಾವು ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದೇವೆ. ಪ್ರತಿ ವರ್ಷವೂ ನಾವು ಈ ರೀತಿ ಹಣವನ್ನು ಇರಿಸಿ ಪೂಜೆ ಮಾಡುತ್ತೇವೆ. ಈ ವಿಚಾರ ನನ್ನ ಸ್ನೇಹಿತರು, ಸಂಬಂಧಿಗಳಿಗೆ ತಿಳಿದಿದೆ ಎಂದು ಹೇಳಿದರು.

ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಬಗ್ಗೆ ಪತ್ರ ತೋರಿಸಿದ ಅವರು, 2 ಲಕ್ಷ ರೂ. ನಗದು ಹಣವನ್ನು ವಹಿವಾಟು ಮಾಡಬಾರದು ಎಂದು ಸರ್ಕಾರ ಹೇಳಿದೆ ಹೊರತು ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಬಾರದು ಎಂದು ಹೇಳಿಲ್ಲ. ನಾವು ನ್ಯಾಯಬದ್ಧವಾಗಿ ಸಂಪಾದಿಸಿದ ಹಣ. ಲಕ್ಷಿ ವಿಲಾಸ್ ಬ್ಯಾಂಕ್ ನಿಂದ 83 ಲಕ್ಷ ರೂ. ಹಣವನ್ನು ಡ್ರಾ ಮಾಡಿದ್ದೇನೆ ಎಂದು ಸುರೇಶ್ ತಿಳಿಸಿದರು.

ಇಷ್ಟೊಂದು ಹಣವನ್ನು ಸಂಪಾದಿಸಿದ್ದು ಹೇಗೆ ಎಂದು ಕೇಳಿದ್ದಕ್ಕೆ 2002ರಲ್ಲಿ ನಮ್ಮದೊಂದು ಜಾಗ ಇತ್ತು. ಆ ಜಾಗವನ್ನು ಮಾರಾಟ ಮಾಡಿದ ಬಳಿಕ ಎಚ್‍ಎಸ್‍ಆರ್ ಲೇಔಟ್ ನಲ್ಲಿ ನಾವು ಮೂರು ಅಂತಸ್ತಿನ ಕಟ್ಟಡವನ್ನು 4.5 ಲಕ್ಷ ರೂ. ಖರ್ಚು ಮಾಡಿ ಕಟ್ಟಿದ್ವಿ. ಬಳಿಕ ಅದನ್ನು 9 ಲಕ್ಷ ರೂ. ಮಾರಾಟ ಮಾಡಿದ್ವಿ. ಇದಾದ ಬಳಿಕ ನಾವು ಕಟ್ಟಡ ಕಟ್ಟಲು ಆರಂಭಿಸಿದ್ವಿ. ನಾನು ಡಿಪ್ಲೊಮ ಓದುವ ಸಮಯದಲ್ಲಿ ಬೆಳಗ್ಗೆ 4.30ಕ್ಕೆ ಎದ್ದ ಕಟ್ಟಡದ ಬಳಿ ಹೋಗುತ್ತಿದ್ದೆ. ನಮ್ಮ ತಂದೆ, ತಾಯಿ, ಅಕ್ಕಂದಿರು ಇಟ್ಟಿಗೆಯನ್ನು ಹೊತ್ತಿದ್ದಾರೆ. ಅಲ್ಲಿಂದ ನಮ್ಮ ಬ್ಯುಸಿನೆಸ್ ಬದಲಾಯ್ತು ಎಂದು ಅವರು ವಿವರಿಸಿದರು.

ಇದೇ ವೇಳೆ ಪಾರ್ಕ್ ಗೆ ಅಂತ ಮೀಸಲಿಟ್ಟಿದ್ದ ಜಾಗದಲ್ಲಿ ನಕಲಿ ಪತ್ರ ಸೃಷ್ಟಿಸಿ ಸೈಟ್‍ಗಳಾಗಿ ಕನ್ವರ್ಟ್ ಮಾಡಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲೆ ಇದೆ ಅಲ್ಲವೇ ಎಂದು ಕೇಳಿದ್ದಕ್ಕೆ, ಈ ಆರೋಪ ಶುದ್ಧ ಸುಳ್ಳು. ಬಿಬಿಎಂಪಿ ಅವರು ನನಗೆ ಜಾಗ ನೀಡಿ ಬಳಿಕ ಅದು ಪಾರ್ಕ್ ಗೆ ಸೇರಿದ ಜಾಗ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನಾನು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.

ನ್ಯಾಯಬದ್ಧವಾಗಿ ಸಂಪಾದನೆ ಮಾಡಿದ್ದೇವೆ. ಯಾವುದೇ ಅಕ್ರಮವನ್ನೂ ಎಸಗಿಲ್ಲ. ಸಂಪಾದನೆಯಾದ ಹಣದಲ್ಲಿ ಮೋಜು ಮಸ್ತಿ ಮಾಡಿಲ್ಲ. ಎಲ್ಲದಕ್ಕೂ ಲೆಕ್ಕ ಇದೆ. ಈ ಹಿಂದೆ ಆರ್ಕ್ಯೂಟ್ ನೆಟ್ ವರ್ಕ್ ಇದ್ದಾಗ ನಾನೇ ಪೂಜೆಯ ಫೋಟೋಗಳನ್ನು ಹಾಕಿದ್ದೆ. ಧೈರ್ಯ ಇರುವ ಕಾರಣಕ್ಕೆ ನಾವು ಈ ರೀತಿಯ ಪೂಜೆ ಮಾಡಿದ್ದೇವೆ ಎಂದು ಅವರು ಪಬ್ಲಿಕ್ ಟಿವಿಗೆ ವಿವರಿಸಿದರು.

Comments

Leave a Reply

Your email address will not be published. Required fields are marked *