ಸ್ಪೀಕರ್ ವಿಧಾನಸಭೆಗೆ ಮಾತ್ರ ಸುಪ್ರೀಂ: ರಮೇಶ್ ಕುಮಾರ್‌ಗೆ ಬಾಲಚಂದ್ರ ಟಾಂಗ್

ಬೆಂಗಳೂರು: ಸ್ಪೀಕರ್ ಕರ್ನಾಟಕ ವಿಧಾನಸಭೆಗೆ ಮಾತ್ರ ಸುಪ್ರೀಂ. ಆದರೆ ಸುಪ್ರೀಂಕೋರ್ಟ್ ದೇಶಕ್ಕೆ ಸುಪ್ರೀಂ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಮೇಶ್ ಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಶಾಸಕರು, ಅನರ್ಹತೆ ಬಗ್ಗೆ 224 ಶಾಸಕರು ಹೆದರುವ ಅಗತ್ಯವಿಲ್ಲ. ಕಾನೂನಿನ ಅನ್ವಯ ಅನರ್ಹತೆ ಮಾಡುವ ಅಧಿಕಾರ ಸ್ಪೀಕರ್ ಅವರಿಗೆ ಇದೆ. ಆದರೆ ಸ್ಪೀಕರ್ ಕೈಗೊಂಡ ಅನರ್ಹತೆ ಆದೇಶ ರದ್ದು ಮಾಡಲು ಸುಪ್ರೀಂ ಕೋರ್ಟ್ ಗೆ ಅಧಿಕಾರವಿದೆ. ಹೀಗಾಗಿ ಯಾವ ಶಾಸಕರು ಕೂಡ ಅನರ್ಹತೆ ಬಗ್ಗೆ ಭಯಪಡಬೇಡಿ ಎಂದು ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರಿಗೆ ಅಭಯ ನೀಡಿದ್ದಾರೆ.

ಬಿಜೆಪಿ ಹೈಕಮಾಂಡ್‍ನಿಂದ ಬುಲಾವ್ ಬಂದಿದ್ದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಅವರು ಕೂಡ ದೆಹಲಿಗೆ ತೆರಳುತ್ತಿದ್ದು, ಪಕ್ಷದ ನಾಯಕರಿಗೆ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *