ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು

ಮಂಗಳೂರು: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನೌಶಾದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ನೌಶಾದ್, ರಿಜ್ವಾನ್, ಪಿಂಕಿ ನವಾಜ್, ನಿರ್ಷಾನ್ ಬಂಧಿತ ಆರೋಪಿಗಳು. ಪರಾರಿಯಾಗಲು ಯತ್ನಿಸಿದ್ದ ವೇಳೇ ರಿಜ್ವಾನ್, ಪಿಂಕಿ ನವಾಜ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದು ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಟಾರ್ಗೆಟ್ ಗ್ಯಾಂಗ್ ಲೀಡರ್ ಸಫ್ವಾನ್ ಸಹಚರನಾಗಿರುವ ರಿಜ್ವಾನ್ ಮೇಲೆ ಕೊಲೆ, ಕೊಲೆಯತ್ನ, ದರೋಡೆ, ಸುಲಿಗೆ, ಸರಕಳ್ಳತನ ಮತ್ತಿತರ ಕೇಸ್ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎನ್ನುವ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.

ವಶಕ್ಕೆ ಪಡೆದು ಮೂಡುಬಿದಿರೆಯ ಮಿಜಾರಿನಿಂದ ಮಂಗಳೂರಿಗೆ ಆರೋಪಿಗಳನ್ನು ಕರೆತರುವಾಗ  ಪೊಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರ ಮೇಲೆ ಆರೋಪಿಗಳು ತಲ್ವಾರ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಬಂಧಿಸಿದ ಆರೋಪಿಗಳನ್ನು ಪೊಲೀಸರು ಈಗ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಗುರುವಾರ ಬಂದ್: ದೀಪಕ್ ಕೊಲೆ ಹಿನ್ನೆಲೆಯಲ್ಲಿ ಗುರುವಾರ ಸುರತ್ಕಲ್, ಕಾಟಿಪಳ್ಳ ಪ್ರದೇಶದಲ್ಲಿ ಬಂದ್ ನಡೆಸಲು ಹಿಂದೂ ಜಾಗರಣ ವೇದಿಕೆ, ಬಜರಂಗದಳ ಕರೆ ನೀಡಿದೆ.

ನಿರ್ಬಂಧಕಾಜ್ಞೆ: ದೀಪಕ್ ರಾವ್ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 10 ಗಂಟೆಯಿಂದ ಗುರುವಾರ ರಾತ್ರಿ 10 ಗಂಟೆಯವರೆಗೆ ನಿರ್ಬಂಧಕಾಜ್ಞೆಯನ್ನು ವಿಧಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶ ಹೊರಡಿಸಿದ್ದು, ಮೆರವಣಿಗೆ, ಜಾಥಾ, ಧರಣಿ, ಸಭೆ ನಡೆಸುವುದಕ್ಕೆ ನಿಷೇಧ ಹೇರಲಾಗಿದೆ.

ಏನಿದು ಪ್ರಕರಣ?
ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ಅವರನ್ನು ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದವರು ಬೈಕನ್ನು ಅಡ್ಡಗಟ್ಟಿ ಮೂಡಾಯಿಕೋಡಿ ಎಂಬಲ್ಲಿ ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದರು.

ಕೊಲೆ ಮಾಡಿ ಸ್ವಿಫ್ಟ್ ಕಾರಿನಲ್ಲಿ ಮೂಡುಬಿದಿರೆ ಮೂಲಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮೂಲ್ಕಿ ಸಬ್ ಇನ್ಸ್ ಪೆಕ್ಟರ್ ಶೀತಲ್ ಕುಮಾರ್ ಸಿನಿಮೀಯ ರೀತಿ ಬೆನ್ನಟ್ಟಿ ಮಿಜಾರು ಎಂಬಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ.  ಪೂರ್ವ ದ್ವೇಷದಿಂದ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕ ಸುರತ್ಕಲ್‍ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂದಿನ ಗಾಜು ಪುಡಿಪುಡಿಯಾಗಿದೆ.

Comments

Leave a Reply

Your email address will not be published. Required fields are marked *