KSRTC ಬಸ್ ನಲ್ಲಿ ಶಿಕ್ಷಕನ ಮೇಲೆ ಯುವಕರ ಹಲ್ಲೆ

ಚಿಕ್ಕಬಳ್ಳಾಪುರ: ಕೆಎಸ್‍ಆರ್ ಟಿಸಿ ಬಸ್ ನಲ್ಲಿ ಖಾಸಗಿ ಶಾಲೆಯ ಶಿಕ್ಷಕನ ಮೇಲೆ ಕೆಲ ಯುವಕರ ಗುಂಪೊಂದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನಂತರ ಬಸ್ ನಿಂದ ಎಳೆದು ತಂದು ಮತ್ತೆ ಅಟ್ಟಾಡಿಸಿ ಹೊರಳಾಡಿಸಿ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನಕುಂಟೆ ಗ್ರಾಮದಲ್ಲಿ ನಡೆದಿದೆ.

ಮಾಮಿಡಿಕಾಯಿಲಪಲ್ಲಿ ಗ್ರಾಮದ ಹಾಗೂ ಬಾಗೇಪಲ್ಲಿ ಪಟ್ಟಣದ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ರಾಜ್‍ಕುಮಾರ್ ಹಲ್ಲೆಗೊಳಗಾದವರು. ರಾಜ್‍ಕುಮಾರ್ ಸಹಾಯಕ್ಕೆ ಬಂದ ಶ್ರೀನಿವಾಸ್ ಮೇಲೆಯೂ ಪುಂಡ ಯುವಕರು ಹಲ್ಲೆ ಮಾಡಿದ್ದಾರೆ.

ಹಲ್ಲೆ ಯಾಕೆ? ಘಟನೆಗೆ ಕಾರಣ ಏನು?
ಲಾಕ್‍ಡೌನ್ ಮುಂಚೆ ಬಾಗೇಪಲ್ಲಿಯಿಂದ ಮಾರ್ಗನುಕುಂಟೆ ಮಾರ್ಗವಾಗಿ ಮಾಮಿಡಿಕಾಯಿಲಪಲ್ಲಿಗೆ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಮಾಡಿತ್ತು. ಕೊರೊನಾ ಅನ್‍ಲಾಕ್ ನಂತರ ಬಸ್ ಸಂಚಾರ ಆರಂಭವಾದರೂ ಮಾಮಿಡಿಕಾಯಿಲಪಲ್ಲಿಗೆ ಬರುತ್ತಿರಲಿಲ್ಲ. ಹೀಗಾಗಿ ಗ್ರಾಮದ ದೈಹಿಕ ಶಿಕ್ಷಕ ರಾಜ್‍ಕುಮಾರ್, ಡಿಪೋ ಮ್ಯಾನೇಜರ್ ಹಾಗೂ ಬಾಗೇಪಲ್ಲಿ ಟಿಸಿ ಬಳಿ ಮನವಿ ಮಾಡಿಕೊಂಡ ಬಸ್ ತಮ್ಮೂರಿಗೆ ಕಳುಹಿಸುವಂತೆ ಕೇಳಿಕೊಂಡಿದ್ದರು.

ಬಾಗೇಪಲ್ಲಿ ಮಾರ್ಗಾನಕುಂಟೆ ಮಾರ್ಗದ ಬಸ್ ಚಾಲಕ ನಲ್ಲಪ್ಪರೆಡ್ಡಿಪಲ್ಲಿ ಮಂಜುನಾಥ್ ಎಂಬಾತ ನಾನು ನಿಮ್ಮೂರಿಗೆ ಬರಲ್ಲ. ನಿಮ್ಮೂರಿಗೆ ಬಂದರೆ ಪ್ರಯಾಣಿಕರು ಇರಲ್ಲ. ಸುಮ್ಮನೇ ಇಂಧನ ವೇಸ್ಟ್ ಎಂದು ವಾದ ಮಾಡಿದ್ದನು. ಈ ವಿಚಾರವನ್ನು ಬಾಗೇಪಲ್ಲಿ ನಿಲ್ದಾಣದಲ್ಲಿ ಬಸ್ ಹೊರಡುವ ಮುನ್ನ ಮತ್ತೆ ಇಳಿದು ಟಿಸಿ ಬಳಿ ಚಾಲಕನ ವಾದ ಮಾಡಿದ ಬಗ್ಗೆ ರಾಜ್‍ಕುಮಾರ್ ತಿಳಿಸುತಿದ್ದರು. ಅಷ್ಟರಲ್ಲಿಯೇ ರಾಜ್ ಕುಮಾರ್ ಬಿಟ್ಟು ಚಾಲಕ ಬಸ್ ನಿಲ್ದಾಣದಿಂದ ಹೊರಟಿದ್ದನು. ಈ ವೇಳೆ ಮಂಜುನಾಥ್ ಗೆ ಕಾಲ್ ಮಾಡಿದ ಟಿಸಿ ಬುದ್ಧಿವಾದ ಹೇಳಿ ಮರಳಿ ವಾಪಸ್ ಬಂದು ರಾಜ್ ಕುಮಾರ್ ಕರೆದುಕೊಂಡು ಹೋಗಲು ತಿಳಿಸಿದ್ರೂ ಬಂದಿಲ್ಲ. ಕೊನೆಗೆ ರಾಜ್‍ಕುಮಾರ್ ಮುಂದೆ ಹೋಗಿ ನಿಲ್ಲಿಸಿದ್ದ ಬಸ್ ಹತ್ತಿ ಊರಿನತ್ತ ಹೊರಟಿದ್ದಾರೆ.

ಈ ಸಂಬಂಧ ಚಾಲಕ ಮಂಜುನಾಥ್ ಹಾಗೂ ರಾಜ್‍ಕುಮಾರ್ ನಡುವೆ ಜಗಳ ನಡೆದಿದೆ. ಬಸ್ ತಮ್ಮೂರಿಗೆ ಬರಲೇಬೇಕು ಅಂತ ರಾಜ್‍ಕುಮಾರ್ ಹಾಗೂ ಮಾಮಿಡಿಕಾಯಿಲಪಲ್ಲಿ ಗ್ರಾಮದವರು ಎರಡು ಗಂಟೆ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಂತರ ಬಸ್ ಮಾಮಿಡಕಾಯಿಲಪಲ್ಲಿಗೆ ಹೋಗಿ ಬಂದಿದೆ. ಇದನ್ನೂ ಓದಿ: ಬಾಗೇಪಲ್ಲಿ ಪಟ್ಟಣದಲ್ಲಿ ಚಿನ್ನ ಖರೀದಿ ನೆಪ-ಸರ ಕದ್ದು ಯುವಕ ಪರಾರಿ

ಚಾಲಕ ಮಂಜುನಾಥ್ ಅಧಿಕಾರಿಗಳು ಆ ರೂಟ್ ನಿಂದ ತೆಗೆದು ಹಾಕಿ ಚಿಂತಾಮಣಿ ರೂಟ್ ಗೆ ಹಾಕಿದ್ದಾರೆ. ಹೀಗಾಗಿ ರಾಜ್ ಕುಮಾರ್ ವಿರುದ್ಧ ಜಿದ್ದು ಇಟ್ಟುಕೊಂಡಿದ್ದ ಚಾಲಕ ಮಂಜುನಾಥ್, ತನ್ನ ಚಿಕ್ಕಪ್ಪನ ಮಗನಿಗೆ ವಿಷಯ ತಿಳಿಸಿದ್ದಾನೆ. ನನಗೆ ರಾಜ್‍ಕುಮಾರ್ ತೊಂದರೆ ಕೊಟ್ಟ ಅಂತ ದ್ವೇಷಕ್ಕೆ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ. ಮಧು ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿ ಮಾರನೇ ದಿನ ಬಸ್ ನಲ್ಲಿ ಹೋಗುತ್ತಿದ್ದಾಗ ಸೀಟಿನಲ್ಲಿ ಕೂತಿದ್ದ ಶಿಕ್ಷಕ ರಾಜ್‍ಕುಮಾರ್ ಮೇಲೆ ವಿನಾಕಾರಣ ಕಿರಿಕ್ ತೆಗೆದಿದ್ದಾರೆ. ಬೇಕಂತಲೇ ಕಾಲು ತಗುಲಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

ಈ ವೇಳೆ ಯುವಕರೆಲ್ಲಾ ಸೇರಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ರಾಜೀ ಪಂಚಾಯತಿಗಳು ನಡೆದು ಕೊನೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಹಲ್ಲೆಗೆ ಕುಮ್ಮಕ್ಕು ನೀಡಿದ ಚಾಲಕ ಮಂಜುನಾಥ್ ಹಾಗೂ ಮಧು ಎಂಬಾತನನ್ನ ವಶಕ್ಕೆ ಪಡೆದಿದ್ದು ಕ್ರಮ ಕೈಗೊಳ್ಳುತ್ತಿರುವುದಾಗಿ ಬಾಗೇಪಲ್ಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 35 ಸ್ಥಾನ ಗೆಲ್ಲಲಿದೆ: ಸಲೀಂ ಅಹಮದ್ ವಿಶ್ವಾಸ

Comments

Leave a Reply

Your email address will not be published. Required fields are marked *