ಜೆಡಿಎಸ್ ಪಕ್ಷಕ್ಕೆ ದೇವೇಗೌಡ ತಂದೆ, ಕುಮಾರಸ್ವಾಮಿ ಸಹೋದರ: ಎನ್.ಎಚ್.ಕೋನರೆಡ್ಡಿ

– 12 ಸೀಟು ಕೊಟ್ಟು ನೋಡ್ಲಿ, ನಾವ್ ಏನೂ ಅನ್ನೊದನ್ನ ತೋರಿಸ್ತೀವಿ
– ಕಾಂಗ್ರೆಸ್‍ಗೆ ಕೋನರೆಡ್ಡಿ ಸವಾಲು

ಬಾಗಲಕೋಟೆ: ಜೆಡಿಎಸ್ ಪಕ್ಷಕ್ಕೆ ಎಚ್.ಡಿ.ದೇವೇಗೌಡ ಅವರು ತಂದೆ, ಸಿಎಂ ಕುಮಾರಸ್ವಾಮಿ ಸಹೋದರ ಇದ್ದಂತೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರದ್ದು ಕುಟುಂಬ ರಾಜಕಾರಣವಲ್ಲ. ಮಂಡ್ಯದಲ್ಲಿ ನಟಿ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರವಾಗಿ ಮೈತ್ರಿ ಪಕ್ಷಗಳ ನಾಯಕರು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಉತ್ತರ ಕರ್ನಾಟಕಕ್ಕೆ ಸಿಎಂ ಕುಮಾರಸ್ವಾಮಿ ಅವರು ಅನ್ಯಾಯ ಮಾಡುತ್ತಿಲ್ಲ. ರೈತರ ಸಾಲಮನ್ನಾ ಯೋಜನೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಲಾಭವಾಗುತ್ತಿದೆ. ಈ ಭಾಗದ ಯಾವುದೇ ಅಭಿವೃದ್ಧಿಯನ್ನು ಸಿಎಂ ಕುಮಾರಸ್ವಾಮಿ ಕಡೆಗಣಿಸಿಲ್ಲ. ರಾಜ್ಯದ ಯಾವುದೇ ಕ್ಷೇತ್ರಕ್ಕೂ ಅನ್ಯಾಯ ಮಾಡುತ್ತಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಬೀಗತನ ನಡೆದಿದೆ. ರಾಜ್ಯದಲ್ಲಿ 22 ಸ್ಥಾನ ಗೆಲ್ಲತ್ತೇವೆ ಎಂಬ ಭರವಸೆ ಇದೆ. ಗೆಲ್ಲುವ ಪ್ರತಿಯೊಬ್ಬರು ಪ್ರತಿನಿಧಿಯೇ. ಆದರೆ ಗೆಲ್ಲುವುದಿಲ್ಲವೆಂದು ತಿಳಿದವರು ಚುನಾವಣೆಗೆ ನಿಲ್ಲಬಾರದು. ಜೆಡಿಎಸ್ ಸಾಮರ್ಥ್ಯವಿಲ್ಲದೆ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್‍ನವರು ರಾಜ್ಯದಲ್ಲಿ ಜೆಡಿಎಸ್‍ಗೆ 12 ಕ್ಷೇತ್ರಗಳನ್ನು ಕೊಟ್ಟು ನೋಡಲಿ, ನಾವು ಏನೂ ಅನ್ನೊದನ್ನ ತೋರಿಸ್ತೀವಿ ಎಂದು ಸವಾಲು ಹಾಕಿದರು.

ವಿಧಾನ ಪರಿಷತ್ ಮಾಜಿ ಸ್ಪೀಕರ್ ಬಸವರಾಜ ಹೊರಟ್ಟಿ ಅಸಮಾಧಾನ ವಿಚಾರವಾಗಿ ಮಾತನಾಡಿದ ಮಾಜಿ ಶಾಸಕರು, ಹೊರಟ್ಟಿ ಅವರಿಗೆ ಸಚಿವ ಸ್ಥಾನ ಸಿಗಬೇಕೆಂದು ನಾನು ಒತ್ತಾಯಿಸಿದ್ದೇನೆ. ಹೀಗಾಗಿ ಶೀಘ್ರದಲ್ಲಿಯೇ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *