ಸಂಭ್ರಮದ ಎಳ್ಳು ಅಮಾವಾಸ್ಯೆ- ಭೂ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

ಬಾಗಲಕೋಟೆ: ಜಿಲ್ಲೆಯಾದ್ಯಂತ ಎಳ್ಳು ಅಮಾವಾಸ್ಯೆಯನ್ನು ರೈತಾಪಿ ವರ್ಗದ ಜನ ಸಂಭ್ರಮದಿಂದ ಆಚರಿಸಿದ್ದು, ಅಮಾವಾಸ್ಯೆ ಅಂಗವಾಗಿ ಜಿಲ್ಲಾದ್ಯಂತ ರೈತರು ವಿಶೇಷ ತಿಂಡಿ, ತಿನಿಸುಗಳನ್ನ ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗಿ ಚರಗ ಚೆಲ್ಲಿ ಸಂಭ್ರಮಿಸಿದರು.

ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಎಲ್ಲ ಕಡೆಗಳಲ್ಲೂ ಚರಗದ ಸಂಭ್ರಮ ಕಾಣಿಸಿತ್ತು. ತಾವೇ ತಯಾರಿಸಿದ ಅಡುಗೆಯನ್ನ ಭೂ ತಾಯಿಗೆ ನೈವೇದ್ಯೆ ನೀಡುವ ಮೂಲಕ, ಚರಗ ಚೆಲ್ಲಿ ಖುಷಿ ಪಟ್ಟರು. ರೈತರು ತಮ್ಮ ತಮ್ಮ ಕುಟುಂಬ ಸಮೇತ ಟ್ರ್ಯಾಕ್ಟರ್, ಚಕ್ಕಡಿ ಕಟ್ಟಿಕೊಂಡು ಹೊಲಗಳಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

ಊರಿಗೆ ಸಮೀಪದಲ್ಲಿರುವ ರೈತರು ಹೊಲದ ಬದುಗಳಲ್ಲೇ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಹಬ್ಬಕ್ಕೆ ಕಳೆ ಕಟ್ಟುವಂತಿತ್ತು. ಚರಗಕ್ಕೆ ಎಂದು ಹೋಗುವುದೇ ದೊಡ್ಡ ಸಂಭ್ರಮವಾಗಿದ್ದು, ಬೆಳಗಿನ ಜಾವವೇ ಎದ್ದು ಎಳ್ಳು ಹೊಳಿಗೆ ಸೇರಿದಂತೆ ವಿವಿಧ ಆಹಾರ ಸಿದ್ಧ ಮಾಡಿಕೊಂಡು, ಅದನ್ನೆಲ್ಲವನ್ನು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಹೊಲದ ತುಂಬೆಲ್ಲ ಹಾಕಿ ಶ್ರದ್ಧಾ ಭಕ್ತಿಯಿಂದ ನೈವೇದ್ಯ ಮಾಡಲಾಗುತ್ತದೆ. ಆ ಬಳಿಕವೇ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಸಂಭ್ರಮದಿಂದ ಊಟ ಮಾಡುವುದು ಹಬ್ಬದ ವಿಶೇಷ.

ಜಿಲ್ಲೆಯ ಹುನಗುಂದ ಪಟ್ಟಣದ ಮಹಾಂತೇಶ್, ಕುಟುಂಬಸ್ಥರ ಜೊತೆ ಚಕ್ಕಡಿಯಲ್ಲಿ ತೆರಳಿ ಭೂತಾಯಿಗೆ ತಿಂಡಿ, ತಿನಿಸುಗಳ ನೈವೇದ್ಯ ಮಾಡಿ, ಕುಟುಂಬ ಸದ್ಯರೊಂದಿಗೆ ಊಟ ಸವಿದು ಸಖತ್ ಎಂಜಾಯ್ ಮಾಡಿದ್ದಾರೆ. ಚಕ್ಕಡಿಯಲ್ಲಿ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ಚರಗಕ್ಕೆ ಹೊರಟಿರುವ ದೃಶ್ಯಗಳು ಮನಮೋಹಕವಾಗಿದ್ದು, ನಾಳೆ ಬೆಳಗಿನ ಜಾವ ಸೂರ್ಯ ಗ್ರಹನ ಹಿನ್ನೆಯಲ್ಲಿ ಹಳ್ಳಿ ಭಾಗದ ಜನರು ಎಳ್ಳು ಅಮಾವಸ್ಯೆಯನ್ನು ಇಂದೇ ಆಚರಿಸಿದ್ದಾರೆ.

Comments

Leave a Reply

Your email address will not be published. Required fields are marked *