ಭಾಗ್ಯಗಳ ಸರದಾರನಿಗೆ ಕೈಕೊಟ್ಟ ‘ಭಾಗ್ಯ’: ಸಿಎಂಗೆ ತವರಲ್ಲಿ ಭಾರೀ ಮುಖಭಂಗ

ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಜಯಗಳಿಸಿದ್ದಾರೆ. 43 ಮತಗಳಿಂದ ಭಾಗ್ಯವತಿ ವಿಜೇತರಾಗಿದ್ದು, ಮೀಸಲಾತಿ ಅಸ್ತ್ರ ಬಳಸಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಭಾರೀ ಮುಖಭಂಗವಾಗಿದೆ.

ಇಂದು ಚುನಾವಣೆಗೂ ಮುನ್ನ ಭಾರೀ ಹೈಡ್ರಾಮಾ ನಡೆದಿತ್ತು. ಕಾಂಗ್ರೆಸ್ ಸದಸ್ಯೆ ಭಾಗ್ಯವತಿ ಜೆಡಿಎಸ್ ನಾಯಕರೊಂದಿಗೆ ಪ್ರತ್ಯಕ್ಷವಾಗಿದ್ದರು. ಶಾಸಕ ಜಿ.ಟಿ.ದೇವೇಗೌಡ, ಸಾರಾ.ಮಹೇಶ್ ಜೊತೆ ಬಂದು ಜೆಡಿಎಸ್-ಬಿಜೆಪಿ ಬೆಂಬಲಿತವಾಗಿ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಅಳುತ್ತಾ ಓಟು ಹಾಕಿದ ಭಾಗ್ಯವತಿ, ಸಹಿಹಾಕುವಾಗವೂ ಕೈ ನಡುಗುತ್ತಾ ಸಹಿಹಾಕಿದ್ರು.

ಪಾಲಿಕೆಯೊಳಗೆ ಜಿಟಿ ದೇವೇಗೌಡ- ಸಚಿವ ತನ್ವಿರ್ ಸೇಠ್ ನಡುವೆ ವಾಗ್ದಾದ ನಡೆದು, ಈ ವೇಳೆ ಸಚಿವ ತನ್ವೀರ್ ಸೇಠ್ ಕುಸಿದು ಬಿದ್ದ ಘಟನೆಯೂ ನಡೆಯಿತು. ಪಾಲಿಕೆ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಜೆಡಿಎಸ್-ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಯಿತು. ಕೈ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಆವರಣದಲ್ಲಿ ಗಲಾಟೆ ಗದ್ದಲ ಉಂಟಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ತನ್ವೀರ್ ಸೇಠ್, ನಮ್ಮಿಂದ ಒಬ್ಬರನ್ನ ಅಪಹರಿಸಿ ಹೈಜಾಕ್ ಮಾಡಿದ್ದಾರೆ. ಮೇಯರ್ ಚುನಾವಣೆ ಸಂಪೂರ್ಣ ಕಾನೂನು ಬಾಹಿರ. ಈ ಬಗ್ಗೆ ನಾವು ಚುನಾವಣಾ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಹೇಳಿದ್ರು. ಪ್ರಸ್ತುತ ಸಂದರ್ಭದಲ್ಲಿ ಮೀಸಲಾತಿ ಬಂದಿದೆ. ಆದ್ರೆ ಅಧಿಕಾರದ ದಾಹ, ಆಸೆಯಿಂದ ಪಕ್ಷಾಂತರ ಮಾಡಿದ್ದಾರೆ. ಈ ಬಗ್ಗೆ ಕೋರ್ಟ್ ಹಾಗೂ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುತ್ತೇವೆ ಅಂದ್ರು.

ಅರ್ಜಿ ಕಿತ್ತು ಹಾಕಿದ ಪ್ರಸಂಗವೂ ನಡೆದಿದೆ. ನಿಗದಿಪಡಿಸಿದ ಜಾಗ ಬಿಟ್ಟು ಬೇರೆಡೆ ಸದಸ್ಯರಿಗೆ ಜಾಗ ಕೊಟ್ಟಿದ್ದಾರೆ. ಇದು ಮೊದಲ ಲೋಪವಾಗಿದೆ. ಪಕ್ಷದ ಸಿದ್ಧಾಂತ ಮೀರಿ ಚುನಾವಣೆ ಏಕಪಕ್ಷೀಯವಾಗಿ ನಡೆದಿದೆ. ಚುನಾವಣಾ ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಏಕಾಏಕಿ ಏಕಪಕ್ಷೀಯವಾಗೆ ನಡೆದುಕೊಳ್ಳಲು ಇಲ್ಲಿಗೆ ಬಂದಿದ್ದಂತಿದೆ. ಇದೆಲ್ಲ ಲೋಪ ಹಾಗೂ ಘಟನೆಗೆ ನೇರವಾಗಿ ಜಿ.ಟಿ.ದೇವೆಗೌಡರೇ ಕಾರಣ ಎಂದು ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ರು.

ಕಾಂಗ್ರೆಸ್ ಸದಸ್ಯೆ ಭಾಗ್ಯವತಿ ಹೈಜಾಕ್ ವಿಚಾರವಾಗಿ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ತಲೆ ಹಾಕಲ್ಲ. ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ರು.

ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದ್ದು, ಪರಿಶಿಷ್ಟ ವರ್ಗದ ಮಹಿಳೆಗೆ ಉಪ ಮೇಯರ್ ಸ್ಥಾನ ಮೀಸಲಾಗಿತ್ತು. ಕಾಂಗ್ರೆಸ್‍ನಲ್ಲಿ ಮಾತ್ರ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಯರು ಇದ್ದರು. ಕಾಂಗ್ರೆಸ್‍ನ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯರಾದ ಕಮಲಾ ಉದಯ್ ಹಾಗೂ ಭಾಗ್ಯಲಕ್ಷ್ಮಿ ಮೇಯರ್ ಸ್ಥಾನದ ಅರ್ಹ ಆಕಾಂಕ್ಷಿಗಳಾಗಿದ್ದರು. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಿಕೆಯಲ್ಲಿ ಅನಿವಾರ್ಯ ಎಂಬಂತಾಗಿತ್ತು.

ನಾಲ್ಕು ವರ್ಷದಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಆಡಳಿತ ಇತ್ತು. ಈ ಬಾರಿ ಮೀಸಲು ಪ್ರಕಾರ ಜೆಡಿಎಸ್- ಬಿಜೆಪಿಯಲ್ಲಿ ಅರ್ಹ ಸದಸ್ಯರು ಇಲ್ಲದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿತ್ತು. ಆದ್ರೆ ಸಿಎಂ ಮೀಸಲಾತಿ ತಂತ್ರಕ್ಕೆ ಜೆಡಿಎಸ್- ಬಿಜೆಪಿ ತಿರುಗೇಟು ನೀಡಿದ್ದು, ಹೈಜಾಕ್ ಅಭ್ಯರ್ಥಿ ಭಾಗ್ಯವತಿ ಜಯಗಳಿಸಿದ್ದಾರೆ. ಇದರಿಂದಾಗಿ ಮೈಸೂರು ಮಹಾ ನಗರ ಪಾಲಿಕೆ ಕೊನೆ ಅವಧಿಯ ಆಡಳಿತ ಹಿಡಿಯುವ ಸಿಎಂ ಪ್ಲಾನ್‍ಗೆ ಜೆಡಿಎಸ್-ಬಿಜೆಪಿ ತಿರುಮಂತ್ರ ಹಾಕಿದಂತಾಗಿದೆ.

Comments

Leave a Reply

Your email address will not be published. Required fields are marked *