ಸಿಎಂ ಬೇಕಾದ್ರೆ ಸಿದ್ದರಾಮಯ್ಯ ಅಲಿಯಾಸ್ ಅಮಾನುಲ್ಲಾ ಖಾನ್ ಎಂದು ಹೆಸರನ್ನು ಬದಲಿಸಿಕೊಳ್ಳಲಿ: ಸಿಟಿ ರವಿ ಕಿಡಿ

ಬೆಂಗಳೂರು: ಮುಖ್ಯಮಂತ್ರಿಗಳು ಬೇಕಾದರೆ ಸಿದ್ದರಾಮಯ್ಯ ಅಲಿಯಾಸ್ ಅಮಾನುಲ್ಲಾ ಖಾನ್ ಎಂದು ಹೆಸರನ್ನು ಬದಲಾಯಿಸಿಕೊಳ್ಳಲಿ. ಆದರೆ ದತ್ತಾತ್ರೇಯ ದೇವರ ಹೆಸರನ್ನು ಬದಲಾಯಿಸುವುದು ಬೇಡ ಎಂದು ಬಿಜೆಪಿ ಮುಖಂಡ ಸಿಟಿ ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದತ್ತಪೀಠಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಕ್ಯಾಬಿನೆಟ್ ನಲ್ಲಿ ಕೈಗೊಂಡ ತೀರ್ಮಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಸರ್ಕಾರ ಮುಜರಾಯಿ ಇಲಾಖೆಯ ಅಡಿ ದತ್ತಪೀಠ ಬರುತ್ತದೆ ಎನ್ನುವ ನಿರ್ಣಯ ಕೈಗೊಂಡಿದೆ. ಮೇಲ್ನೋಟಕ್ಕೆ ಇದು ಹಿಂದೂಗಳ ಪರವಾಗಿದೆ ಎಂದು ಕಾಣಿಸಿಕೊಂಡರೂ ಒಳಗಡೆ ವಂಚನೆ ಇದೆ ಎಂದು ಆರೋಪಿಸಿದರು.

1927ರಿಂದ ಮುಜರಾಯಿ ವಶದಲ್ಲಿ ದತ್ತಪೀಠ ಇತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ದತ್ತ ಪೀಠವನ್ನು ವಕ್ಫ್ ಬೋರ್ಡ್ ಗೆ ಸೇರಿಸುವ ಪ್ರಯತ್ನ ನಡೆದಿತ್ತು. 1980ರಲ್ಲಿ ಜಿಲ್ಲಾ ಕೋರ್ಟ್ ಮುಜರಾಯಿ ಅಡಿ ಬರುತ್ತದೆ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಹೈಕೊರ್ಟ್ ರಿಟ್ ಅರ್ಜಿ ಹಾಕಿತ್ತು. ಇಲ್ಲೂ ವಜಾಗೊಂಡ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಸುಪ್ರೀಂ ಮೊರೆ ಹೋಗಿತ್ತು. 1991ರಲ್ಲಿ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿತ್ತು. ಈಗಾಗಲೇ ಮುಜರಾಯಿ ಇಲಾಖೆಯ ಅಡಿಯಲ್ಲೇ ದತ್ತಪೀಠ ಇರುವಾಗ ಮತ್ತೆ ಪುನಃ ಮುಜರಾಯಿ ಸುಪರ್ದಿಗೆ ನೀಡುತ್ತೇವೆ ಎಂದು ಹೇಳುವುದೇ ಹಾಸ್ಯಾಸ್ಪದ ಎಂದರು.

ಹಿಂದೂ ಅರ್ಚಕರ ನೇಮಕವಾಗಬೇಕು ಎನ್ನುವ ಬೇಡಿಕೆ ನಮ್ಮದು. ಅದನ್ನು ಬಿಟ್ಟು ಸರ್ಕಾರ ಇಲ್ಲೂ ಓಲೈಕೆಯ ರಾಜಕಾರಣ ಮಾಡಲು ಹೊರಟಿದೆ. ತನಗೆ ಬೇಕಾದಂತೆ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದ ತಜ್ಞರ ಸಮಿತಿಯನ್ನು ಸರ್ಕಾರ ನೇಮಿಸಿತ್ತು ಎಂದು ಸಿಟಿ ರವಿ ಆರೋಪಿಸಿದರು.

ಗುರು ದತ್ತಾತ್ರೇಯಾ ಬಾಬಾ ಬುಡಾನ್ ಗಿರಿ ದರ್ಗಾ ಎಂದು ಕರೆಯುವ ಹಕ್ಕು ಕಾಂಗ್ರೆಸ್ ಆಗಲಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಮಸೀದಿಯಲ್ಲಿ ಅರ್ಚಕರ ನೇಮಕಕ್ಕೆ ಮುಸ್ಲಿಮರು ಒಪ್ಪುತ್ತಾರಾ? ಹೀಗಾಗಿ ಇಲ್ಲೂ ಹಿಂದೂ ಅರ್ಚಕರ ನೇಮಕ ಆಗಬೇಕು. ಮಸೀದಿಯಲ್ಲಿ ಅರ್ಚಕರ ನೇಮಕಕ್ಕೆ ಒಪ್ಪಿದರೆ ಇಲ್ಲಿ ಮುಜವರ್ ಪೂಜೆಗೆ ನಾವು ಒಪ್ಪಿಗೆ ನೀಡುತ್ತೇವೆ ಎಂದು ಹೇಳಿದರು.

ಟಿಪ್ಪು ಜಯಂತಿ, ಮುಗ್ಧ ಅಲ್ಪಸಂಖ್ಯಾತರ ಮೇಲಿನ ಕೇಸ್ ಹಿಂಪಡೆಯಲು ಹೊರಡಿಸಿದ ಸುತ್ತೋಲೆ, ಬಹುಮನಿ ಉತ್ಸವ ಆಚರಣೆ ಮಾಡಲು ಮುಂದಾಗಿದ್ದು, ಮಠಗಳನ್ನು ವಶಪಡಿಸಲು ಹೊರಡಿಸಿದ್ದ ನೋಟಿಸ್ ಬಳಿಕದ ಓಲೈಕೆಯ ರಾಜಕಾರಣದ ಮುಂದುವರಿದ ಭಾಗವಾಗಿ ಸರ್ಕಾರ ತನ್ನ ಕ್ಯಾಬಿನೆಟ್ ನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಅಷ್ಟೇ ಅಲ್ಲದೇ ಮುಂದಿನ ಯಡಿಯೂರಪ್ಪ ಸರ್ಕಾರದಲ್ಲಿ  ಈಗ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ. ಇಲ್ಲಿ ಇರುವುದು ದತ್ತಾತ್ರೇಯ ಪಾದುಕೆ. ಮುಸ್ಲಿಮರ ಧಾರ್ಮಿಕ ಆಚರಣೆಗೂ ಹಿಂದೂಗಳ ಧಾರ್ಮಿಕ ಆಚರಣೆ, ನಂಬಿಕೆಗೆಳಿಗೆ ವ್ಯತ್ಯಾಸವಿದೆ. ಹೀಗಿರುವಾಗ ಅವರು ಹೇಗೆ ಪೂಜೆ ಮಾಡುತ್ತಾರೆ ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

https://youtu.be/y046j74RqOI

Comments

Leave a Reply

Your email address will not be published. Required fields are marked *