ಹೇಗೆ ಬದುಕ್ಬೇಕು, ಹೇಗೆ ಸಾಮಾಜಿಕ ಕಾರ್ಯಗಳನ್ನು ಮಾಡ್ಬೇಕು ಅನ್ನೋದಕ್ಕೆ ಪುನೀತ್ ಮಾದರಿ: ರಾಜಮೌಳಿ

ಬೆಂಗಳೂರು: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಇಂದು ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಹೌದು. ಸಾಂಗ್ ಲಾಂಚ್‍ಗೆ ಖಖಖ ನಿರ್ದೇಶಕ ರಾಜಮೌಳಿ ಹಾಗೂ ಪತ್ನಿ ರಮಾ ರಾಜಮೌಳಿ ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ದಂಪತಿ ಸದಾಶಿವನಗರದಲ್ಲಿರುವ ಪುನೀತ್ ಮನೆಗೆ ತೆರಳಿದ್ದಾರೆ. ಪುನೀತ್ ಕುಟುಂಬಸ್ಥರಿಗೆ ರಾಜಮೌಳಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಬಳೀಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನು ಹೇಳಬೇಕೋ ನನಗೆ ಗೊತ್ತಾಗ್ತಿಲ್ಲ. ಅವರು ಇಲ್ಲ ಅನ್ನೋದನ್ನ ಊಹಿಸಿಕೊಳ್ಳೋಕೂ ಸಾಧ್ಯವಾಗ್ತಿಲ್ಲ. ಅವರನ್ನ ಭೇಟಿಯಾಗಿ ಮಾತಾನಾಡಿದಾಗ ಸ್ಟಾರ್ ಜೊತೆ ಮಾತನಾಡಿದ ಹಾಗೆ ಅನ್ನಿಸಿರಲಿಲ್ಲ. ಪಕ್ಕದ ಮನೆಯವರ ಜೊತೆ ಮಾತನಾಡಿದ ಹಾಗೆ ಅನಿಸ್ತಿತ್ತು. ಅವರ ಸಾಮಾಜಿಕ ಕಾರ್ಯಗಳು ಜಗತ್ತಿಗೆ ಗೊತ್ತಾಗಿದೆ. ಹೇಗೆ ಬದುಕಬೇಕು, ಹೇಗೆ ಸಾಮಾಜಿಕ ಕಾರ್ಯಗಳನ್ನ ಮಾಡಬೇಕೆಂದು ಮಾದರಿಯಾಗಿದ್ದಾರೆ ಎಂದು ಭಾವುಕರಾದರು. ಇದನ್ನೂ ಓದಿ: ರಂಗೋಲಿಯಲ್ಲಿ ಪುನೀತ್ ಭಾವಚಿತ್ರ ಬಿಡಿಸಿ ಕಲಾವಿದ ನಮನ

ಅಕ್ಟೋಬರ್ 29ರ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ RRR ಸಿನಿಮಾದ ಹಾಡು ಲಾಂಚ್ – ಕನ್ನಡದಲ್ಲಿ ರಾಜಮೌಳಿ ಮಾತು

ಪುನೀತ್ ಅಂತ್ಯಸಂಸ್ಕಾರಕ್ಕೆ ಸ್ಟಾರ್ ನಟರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಅಲ್ಲದೆ ಆ ಬಳಿಕನೂ ಅಪ್ಪು ಮನೆಗೆ ಅನೇಕ ಮಂದಿ ಗಣ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಅಂತೆಯೇ ಇಂದು ರಾಜ್ ಮೌಳಿ ಕೂಡ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

Comments

Leave a Reply

Your email address will not be published. Required fields are marked *