ಹಲವು ವರ್ಷಗಳ ನಮ್ಮ ತಪಸ್ಸು ಇವತ್ತು ಫಲ ನೀಡುತ್ತಿದೆ: ಬಿವೈ ರಾಘವೇಂದ್ರ

ಬೆಂಗಳೂರು: ನಮ್ಮ ನಾಯಕರಾದ ಬಿಎಸ್ ಯಡಿಯೂರಪ್ಪ ಅವರ ಹಲವು ವರ್ಷಗಳ ತಪಸ್ಸು ಹಾಗೂ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ನಡೆಯುತ್ತಿದ್ದ ದುರಾಡಳಿತ ಫಲವಾಗಿ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗುತ್ತಿದ್ದಾರೆ ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಇಂದಿನಿಂದ ರಾಜ್ಯದ ಜನರಿಗೆ ಸುವರ್ಣ ದಿನಗಳು ಆರಂಭ ಆಗಲಿದೆ ಎಂಬ ಭರವಸೆ ನನಗಿದೆ. ಏಕೆಂದರೆ ಇಷ್ಟು ದಿನ ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಸರ್ಕಾರ ಇರುತಿತ್ತು. ಪರಿಣಾಮ ರಾಜ್ಯದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳು ಜಾರಿಯಾಗದೇ ನೆನಗುದಿಗೆ ಬಿದ್ದಿದ್ದವು. ಆದರೆ ಇನ್ನು ಮುಂದೆ ಎಲ್ಲ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಿಸುತ್ತೇವೆ ಎಂದು ಹೇಳಿದರು.

ಸಂಜೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಮುಂದಿನ 3 ದಿನಗಳಲ್ಲಿ ನಾವು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುತ್ತೇವೆ ಎಂಬ ವಿಶ್ವಾಸ ನನಗೆ ಇದೆ. ನಮಗೆ ಸಿಕ್ಕ ನೈತಿಕ ಗೆಲುವು ಎಂದು ಭಾವಿಸುತ್ತೇನೆ. ರಾಜ್ಯದಿಂದ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿರುವುದರಿಂದ ರಾಜ್ಯಕ್ಕೆ ಬೇಕಾದ ಹಲವು ಯೋಜನೆಗಳನ್ನು ತರಲು ಇದು ನೆರವಾಗುತ್ತದೆ. ಇಷ್ಟು ದಿನ ರಾಜಕೀಯ ದುರುದ್ದೇಶದಿಂದ ಯೋಜನೆಗಳನ್ನು ತರುವುದು ಕಷ್ಟವಾಗುತಿತ್ತು. ಈಗಾಗಲೇ ನಿಧಾನವಾಗಿ ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *