ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್‍ಗೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು ಭರ್ಜರಿ ಜಯ ಗಳಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ರಾಜಾ ಅಮರೇಶ್ವರ ನಾಯಕ್ 4,83,552 ಮತಗಳನ್ನು ಗಳಿಸಿದ್ದರೆ, ಬಿ.ವಿ ನಾಯಕ್ 3,97,138 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಕಂಡಿದ್ದಾರೆ.

ಬಿಜೆಪಿ ಗೆಲ್ಲಲು ಕಾರಣವೇನು?
ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಹಿಂದಿಕ್ಕಲು ಜಿಲ್ಲೆಯಲ್ಲಿರುವ ಮೋದಿ ಹವಾನೇ ಮುಖ್ಯ ಕಾರಣವಾಗಿದೆ. ಸಂಭಾವಿತ ರಾಜಕಾರಣಿ ಅನ್ನೋ ಹೆಗ್ಗಳಿಕೆ, ಎರಡು ಬಾರಿ ಸಚಿವರಾಗಿ ಆಯ್ಕೆಯಾಗಿದ್ದ ಅನುಭವ, ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿರುವುದು ಹಾಗೂ ಯಾವುದೇ ವಿವಾದಗಳಲ್ಲಿ ಸಿಕ್ಕಾಕಿಕೊಳ್ಳದೇ ಇರುವ ಪರಿಣಾಮವೇ ಜನರು ರಾಜಾ ಅಮರೇಶ್ವರ ನಾಯಕ್ ಅವರನ್ನು ಗೆಲುವಿನ ಗದ್ದುಗೆಗೆ ಏರಿಸಿದ್ದಾರೆ.

ಆದರೆ ಹಾಲಿ ಸಂಸದರಾದರೂ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸ ಮಾಡದಿದ್ದಕ್ಕೆ ಈ ಬಾರಿ ಬಿ.ವಿ ನಾಯಕ್ ಸೋಲು ಕಂಡಿದ್ದಾರೆ. ಕ್ಷೇತ್ರದ ಜನರ ಸಂಪರ್ಕದಿಂದ ಬಹು ದೂರ ಉಳಿದುಕೊಂಡು ಮತಗಳನ್ನು ಅವರೇ ಕಡಿಮೆ ಮಾಡಿಕೊಂಡಿದ್ದಾರೆ. ಹಾಗೆಯೇ ಜೆಡಿಎಸ್ ಜೊತೆಗಿನ ಮೈತ್ರಿ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗಿಲ್ಲ. ಕೇಂದ್ರದ ಯೋಜನೆಗಳನ್ನ ಕ್ಷೇತ್ರದ ಜನರಿಗೆ ಮುಟ್ಟಿಸುವಲ್ಲಿ ಬಿ.ವಿ ನಾಯಕ್ ವಿಫಲವಾಗಿದ್ದಾರೆ. ಅಲ್ಲದೆ ಯಾದಗಿರಿ, ಸುರಪುರ, ಶಹಪುರ ಕ್ಷೇತ್ರಗಳ ಜೊತೆ ಸಂಪರ್ಕ ಅತ್ಯಂತ ಕಡಿಮೆ ಇರುವುದೇ ಅವರನ್ನು ಗೆಲುವಿನಿಂದ ದೂರಮಾಡಿದೆ.

Comments

Leave a Reply

Your email address will not be published. Required fields are marked *