ಭರವಸೆಯನ್ನು ಈಡೇರಿಸಲು ಆಗದ್ದಕ್ಕೆ ಬಿಜೆಪಿ ವಿರುದ್ಧ ಆರೋಪ: ಡಿಕೆಶಿಗೆ ಶ್ರೀರಾಮುಲು ಟಾಂಗ್

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‍ಗೆ ಅಭದ್ರತೆ ಕಾಡುತ್ತಿದ್ದು, ಸುಮ್ಮನೆ ಅಪರೇಷನ್ ಕಮಲ ಅಂತಾ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಮೈತ್ರಿ ಸರ್ಕಾರ ರಚನೆಯ ವೇಳೆ ಕೆಲವು ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿ, ಮೋಸ ಮಾಡಿದ್ದಾರೆ. ತಾವು ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಹಿಂದೆ ಶಾಸಕರು ಬೆನ್ನು ಬಿದ್ದಿದ್ದು, ಇದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಬ್ಬರನ್ನು ಮತ್ತೊಬ್ಬರು ಆರೋಪಿಸಿ, ಟೀಕಿಸಿ, ವಿರೋಧಿಸಿದ್ದರು. ಈಗ ಇಬ್ಬರು ಸೇರಿ ಸರ್ಕಾರ ನಡೆಸುತ್ತಿದ್ದಾರೆ. ದೋಸ್ತಿ ಸರ್ಕಾರದ ಕೆಲವು ಸದಸ್ಯರ ಮಧ್ಯೆ ಶೀತಲ ಸಮರ ಇದ್ದೇ ಇದೆ. ಅದನ್ನು ಸರಿಪಡಿಸಿಕೊಳ್ಳದೇ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.

ನಾವು ಈಗ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿದ್ದೇವೆ. ನಮಗೆ ಆಪರೇಷನ್ ಕಮಲಕ್ಕೆ ಸಮಯವಿಲ್ಲ. ಸರ್ಕಾರ ಬೀಳಿಸುವ ಹಾಗೂ ಅದರ ತಂಟೆಗೆ ಹೋಗುವ ವಿಚಾರವನ್ನು ಮಾಡುವುದಿಲ್ಲವೆಂದು ನಿರ್ಧಾರ ಮಾಡಿದರೂ ಬಿಜೆಪಿ ನಾಯಕರ ವಿರುದ್ಧ ದೂರುತ್ತಿದ್ದಾರೆ. ನಮ್ಮ ಜೊತೆಗೆ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎನ್ನುವುದು ಸುಳ್ಳು. ಶಾಸಕರಲ್ಲಿ ಹೊಂದಾಣಿಕೆ ಕಾಯ್ದುಕೊಳ್ಳುವ ಕೆಲಸವನ್ನು ಶಿವಕುಮಾರ್ ಮಾಡಬೇಕಿದೆ ಎಂದು ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆ ಉದ್ದೇಶದಿಂದ ಶಾಸಕ ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡುವ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ರಾಜಕರಾಣ ನಿಂತ ನೀರಲ್ಲ. ನಾನು ಇಲ್ಲದಿದ್ದರೆ ಮತ್ತೊಬ್ಬರು ಕ್ಷೇತ್ರವನ್ನು ಮುನ್ನಡೆಸುತ್ತಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇವರು ನಮ್ಮ ಕೈ ಹಿಡಿಯುತ್ತಾನೆಂಬ ಭರವಸೆ ಇದೆ ಎಂದರು.

ಎಂ.ಕರುಣಾನಿಧಿ ದೇಶದ, ತಮಿಳುನಾಡಿನ ಹಿರಿಯ ಮುತ್ಸದ್ಧಿ ರಾಜಕಾರಣಿ. ಅವರ ಅಗಲಿಕೆ ದೇಶದ ಜನರಿಗೆ ಬಹಳ ನೋವುಂಟು ಮಾಡಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ಕರುಣಾನಿಧಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಸಂತಾಪ ಸೂಚಿಸಿದರು.

Comments

Leave a Reply

Your email address will not be published. Required fields are marked *