ಬಿಎಸ್‍ವೈ ಮೇಲೆ ಮುನಿಸಿಕೊಂಡ ರಮೇಶ್ ಜಾರಕಿಹೊಳಿ

ಬೆಂಗಳೂರು: ಬೆಳಗಾವಿ ಸಾಹುಕಾರ, ಗೋಕಾಕ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದಿಂದಲೂ ಸಿಎಂ ಮೇಲೆ ರಮೇಶ್ ಜಾರಕಿಹೊಳಿ ಮುನಿಸಿಕೊಂಡಿದ್ದು, ಲಕ್ಷ್ಮಣ ಸವದಿ ನಂತರದ ಸ್ಥಾನ ನನಗೆ ಬೇಡ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆ ವಿಳಂಬವಾಗುತ್ತಿದೆ. ಇತ್ತ ರಾಜ್ಯ ಬಿಜೆಪಿ ಮೂವರು ಡಿಸಿಎಂಗಳನ್ನು ನೇಮಕ ಮಾಡಿದೆ. ಮೂವರು ನಾಯಕರನ್ನು ಡಿಸಿಎಂ ಮಾಡಿದ ಮೇಲೆ ನನ್ನನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದರ ಗ್ಯಾರೆಂಟಿ ಇದೆಯಾ ಎಂದು ರಮೇಶ್ ಜಾರಕಿಹೊಳಿ ಚಿಂತಿತರಾಗಿದ್ದಾರಂತೆ. ನಮ್ಮ ಸಹಕಾರದಿಂದಲೇ ಸರ್ಕಾರ ರಚನೆಯಾಗಿದ್ದರೂ ನಮಗೆ ಬೆಲೆ ಇಲ್ಲದಿದ್ದರೆ ಹೇಗೆ ಎಂದು ರಮೇಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಸಂಪುಟ ಸೇರ್ಪಡೆಯಾಗಿದ್ದಾರೆ. ಮೂರನೇ ಡಿಸಿಎಂ ಆಗಿಯೂ ನೇಮಕಗೊಂಡಿದ್ದಾರೆ. ಲಕ್ಷ್ಮಣ ಸವದಿ ಮೂರನೇ ಡಿಸಿಎಂ ಆದ್ರೆ ನಾನು ನಾಲ್ಕನೇ ಡಿಸಿಎಂ ಅನಿಸಿಕೊಳ್ತೀನಿ. ಹಾಗಾಗಿ ಸವದಿ ನಂತರದ ಸ್ಥಾನ ನನಗೆ ಬೇಡ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *