ಭತ್ತ ನಾಟಿ ನಾಟಕ ಬಿಟ್ಟು, ರೈತರ ಭೂಮಿಗೆ ನೀರು ಹರಿಸಲಿ: ಬಿಎಸ್‍ವೈ

ರಾಯಚೂರು: ಸಿಎಂ ಭತ್ತ ನಾಟಿ ಮಾಡುವ ನಾಟಕವನ್ನು ಬಿಟ್ಟು, ರೈತರ ಭೂಮಿಗೆ ನೀರು ಹರಿಸಲಿ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಹಾಗೂ ಸ್ಥಳೀಯ ಚುನಾವಣೆ ಹಿನ್ನಲೆಯಲ್ಲಿ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರದ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ತುಘಲಕ್ ಆಡಳಿತ ನಿರ್ಮಾಣವಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

ಬರ ಎದುರಿಸುತ್ತಿರುವ ಜಿಲ್ಲೆಗಳಿಗೆ ಭೇಟಿ ಪರಿಶೀಲನೆ ನಡೆಸದೆ, ನೀರು ಬಿಟ್ಟಿರುವ ಜಿಲ್ಲೆಯಲ್ಲಿ ಭತ್ತ ಮಾಡುತ್ತಿದ್ದಾರೆ. ಬರದಿಂದ ಪರದಾಡುತ್ತಿರುವ ಜಿಲ್ಲೆಗಳ ರೈತರ ಭೂಮಿಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮ್ಮಿಶ್ರ ಸರ್ಕಾರ ಮಾಡುತ್ತಿಲ್ಲ. ಭತ್ತದ ನಾಟಿ ಮಾಡಲು ನಿಮ್ಮನ್ನು ಮುಖ್ಯಮಂತ್ರಿ ಮಾಡಿಲ್ಲ. ರಾಜ್ಯದ ಎಲ್ಲ ಭಾಗದ ರೈತರು ಸಮೃದ್ಧವಾಗಿ ಬೆಳೆ ಬೆಳೆಯಲು ಶ್ರಮಿಸಲಿ ಅಂತಾ ನಿಮಗೆ ಜನರು ಅಧಿಕಾರ ನೀಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದರೆ ರಾಯಚೂರು ಬಂದ್‍ಗೆ ಕರೆ ನೀಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು, 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದ್ದು, ರಾಜ್ಯದ 23 ರಿಂದ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆಕೊಟ್ಟರು.

Comments

Leave a Reply

Your email address will not be published. Required fields are marked *