ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡ್ಬೇಕು ಅನಿಸುತ್ತೆ: ಸದನದಲ್ಲಿ ಆಜಂ ಖಾನ್ ವಿವಾದಾತ್ಮಕ ಹೇಳಿಕೆ

– ಚರ್ಚೆ ವೇಳೆ ನಾಲಿಗೆ ಹರಿಬಿಟ್ಟ ಅಜಂಖಾನ್

ನವದೆಹಲಿ: ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುತ್ತಿದ್ದ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಅವರು ಈ ಬಾರಿ ಸದನದಲ್ಲಿ ಅಂತಹದ್ದೇ ಹೇಳಿಕೆ ನೀಡಿ, ಟೀಕೆಗೆ ಗುರಿಯಾಗಿದ್ದಾರೆ.

ತ್ರಿವಳಿ ತಲಾಖ್ ಕುರಿತು ಸದನದಲ್ಲಿ ಗುರುವಾರ ಗಂಭೀರ ಚರ್ಚೆ ನಡೆದಿತ್ತು. ಈ ವೇಳೆ ಸ್ಪೀಕರ್ ಸ್ಥಾನದಲ್ಲಿದ್ದ ಬಿಜೆಪಿಯ ಸಂಸದೆ ರಮಾದೇವಿ ಅವರ ಕಡೆಗೆ ನೋಡಿದ ಆಜಂ ಖಾನ್, ನೀವು ಎಂದರೆ ನನಗೆ ತುಂಬಾ ಇಷ್ಟ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಬೇಕು ಎನಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆಜಂ ಖಾನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ರಮಾದೇವಿ ಅವರು, ಸಂಸದರಾಗಿ ಹೀಗೆ ಮಾತನಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಗುಡುಗಿದರು. ತಕ್ಷಣವೇ ಎಚ್ಚೆತ್ತುಕೊಂಡ ಆಜಂ ಖಾನ್ ಅವರು, ನೀವು ನನ್ನ ಸಹೋದರಿ ಸಮಾನ. ಆ ದೃಷ್ಟಿಯಿಂದ ಮಾತನಾಡಿದೆ ಅಷ್ಟೇ ಎಂದು ಹೇಳಿ ಜಾರಿಕೊಂಡರು.

ಆಜಂ ಖಾನ್ ಹೇಳಿಕೆಯನ್ನು ಸ್ಪೀಕರ್ ಓಮ್ ಬಿರ್ಲಾ ಕೂಡ ಖಂಡಿಸಿದ್ದಾರೆ. ಇತ್ತ ಆಡಳಿತ ಪಕ್ಷದ ಸದಸ್ಯರು, ಆಜಂ ಖಾನ್ ಸದನಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಆದರೆ ಕ್ಷಮೆಯಾಚಿಸಲು ನಿರಾಕರಿಸಿದ ಆಜಾಂ ಖಾನ್, ಅಸಂಸದೀಯ ಪದವನ್ನು ನಾನು ಬಳಸಿಲ್ಲ. ಬೇಕಾದರೆ ರಾಜೀನಾಮೆ ನೀಡುತ್ತೇನೆ. ಕ್ಷಮೆ ಕೇಳುವುದಿಲ್ಲ ಎಂದು ಕಲಾಪದಿಂದ ಹೊರನಡೆದರು. ಈ ವೇಳೆ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅವರು, ಆಜಂ ಖಾನ್ ಮಾತು ಕವಿತೆಯಂತಿತ್ತು. ಅದರಲ್ಲೇನು ತಪ್ಪಿದೆ ಅಂತ ಸಮರ್ಥಿಸಿಕೊಂಡು ಸದನದಿಂದ ನಿರ್ಗಮಿಸಿದರು.

ವಿಶ್ವದ 20 ದೇಶಗಳಲ್ಲಿ ನಿಷೇಧವಾಗಿರುವ ತ್ರಿವಳಿ ತಲಾಖ್ ಪದ್ಧತಿ ನಮ್ಮಲ್ಲೇಕಾಗಬಾರದು ಅಂತ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ವಿಪಕ್ಷ ನಾಯಕರಿಗೆ ಬೆವರಿಳಿಸಿದರು. ಇದು ಧರ್ಮಾಧಾರಿತ ಮಸೂದೆಯಲ್ಲ. ಮುಸ್ಲಿಂ ಮಹಿಳೆಯರ ರಕ್ಷಣೆಗೆ, ಲಿಂಗಭೇದ-ತಾರತಮ್ಯ ನಿವಾರಣೆಗೆ ಕೇಂದ್ರದ ಸರ್ಕಾರ ಬಿಲ್ ಜಾರಿಗೆ ತರ್ತಿದೆ ಅಂತ ಬಲವಾಗಿ ವಾದಿಸಿದರು.

Comments

Leave a Reply

Your email address will not be published. Required fields are marked *