201 ಬಾರಿ ಶಬರಿಮಲೆ ಏರಿದ ಅಯ್ಯಪ್ಪನ ಪರಮಭಕ್ತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಯ್ಯಪ್ಪ ಭಕ್ತರೊಬ್ಬರು ಬರೋಬ್ಬರಿ 201 ಬಾರಿ ಅಯ್ಯಪ್ಪನ ಶಬರಿಮಲೆಯೇರಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಅಯ್ಯಪ್ಪನ ಭಕ್ತಿಯ ಸಂಕೇತವಾಗಿ ತನ್ನೂರಿನಲ್ಲಿ ಅಯ್ಯಪ್ಪ ಮಂದಿರ ಕಟ್ಟಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಡ್ಡಂಗಾಯದ ಶಿವಪ್ರಸಾದ್ ಎಂಬವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತ. ವೃತ್ತಿಯಲ್ಲಿ ಪುತ್ತೂರು ತಾಲೂಕು ಪಂಚಾಯತ್‍ನ ಪ್ರಭಾರ ವ್ಯವಸ್ಥಾಪಕರಾಗಿರುವ 35 ವರ್ಷದ ಶಿವಪ್ರಸಾದ್ ಈ ಹಿಂದೆ ಅಯ್ಯಪ್ಪ ದರ್ಶನ ಮಾಡಿದ್ದರು. ಬಳಿಕ ಶಬರಿಮಲೆ ಯಾತ್ರೆ ಮಾಡುತ್ತಿದ್ದು, 2004ರಲ್ಲಿ ಯಾತ್ರೆ ಕೈಗೊಂಡಾಗ ಇನ್ನು 48 ಬಾರಿ ಮಾಲಾಧಾರಿಯಾಗಿ ಶಬರಿಮಲೆಗೆ ಬರುತ್ತೇನೆ ಎಂದು ಸಂಕಲ್ಪ ಮಾಡಿದ್ದರು.

2008ರಲ್ಲಿ ಸಂಕಲ್ಪ ಪೂರೈಸಿದರೂ ನಂತರ ಅಯ್ಯಪ್ಪನನ್ನು ನೋಡದೆ ಇರಲು ಮನಸಾಗದೇ ಪ್ರತಿ ತಿಂಗಳು ಶಬರಿಮಲೆ ಯಾತ್ರೆ ಕೈಗೊಂಡು ಕಳೆದ ವಾರ ಒಟ್ಟು 201 ಬಾರಿ ಶಬರಿಮಲೆ ಯಾತ್ರೆ ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರತಿ ತಿಂಗಳು ಸಂಕ್ರಮಣ ಆಸುಪಾಸಿನ ಶನಿವಾರ ಯಾತ್ರೆಗೆ ತೆರಳುವ ಇವರು ಅದಕ್ಕೂ ಮುನ್ನ 12 ದಿನ ಮಾಲಾಧಾರಿಗಳಾಗಿ ಇರುತ್ತಾರೆ. ಅಲ್ಲದೇ ಗುರುಸ್ವಾಮಿಯಾಗಿರುವ ಇವರು ಇತರ ಸ್ವಾಮಿಗಳನ್ನು ಜೊತೆಗೆ ಕರೆದುಕೊಂಡು ಹೋಗಿ ಸೋಮವಾರ ಮತ್ತೆ ಕಛೇರಿಗೆ ಹಾಜರಾಗುತ್ತಾರೆ.

ಅಲ್ಲದೆ ಊರವರ ಹಾಗೂ ಸಹ ಸ್ವಾಮಿಗಳ ಸಹಕಾರದಿಂದ 2018ರಲ್ಲಿ 26 ಲಕ್ಷ ವೆಚ್ಚದ ಅಯ್ಯಪ್ಪ ಮಂದಿರ ನಿರ್ಮಿಸಿದ್ದಾರೆ. ಅಯ್ಯಪ್ಪ ದೇಹದಲ್ಲಿ ಆರೋಗ್ಯ ಶಕ್ತಿ ಎಲ್ಲಿಯವರೆಗೆ ನೀಡುತ್ತಾನೋ ಅಲ್ಲಿಯವರೆಗೂ ಶಬರಿ ಮಲೆ ಯಾತ್ರೆ ಕೈಗೊಳ್ಳುತ್ತೇನೆ ಎಂದು ಶಿವಪ್ರಸಾದ್ ಹೇಳಿದ್ದಾರೆ.

ಅಯ್ಯಪ್ಪನ ಯಾತ್ರೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಆದರೂ ಪ್ರತಿ ವರ್ಷ ಕೋಟ್ಯಂತರ ಮಾಲಾಧಾರಿಗಳು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಆದರೆ ಶಿವಪ್ರಸಾದ್ ಅವರಂತೆ ಯಾರೂ ಇಷ್ಟೊಂದು ಬಾರಿ ಶಬರಿಮಲೆ ಯಾತ್ರೆ ಕೈಗೊಂಡಿರುವುದು ಅಸಾಧ್ಯವಾಗಿದ್ದು, ಇವರು ದಾಖಲೆ ನಿರ್ಮಿಸಿದ್ದಾರೆ.

Comments

Leave a Reply

Your email address will not be published. Required fields are marked *