ಅಯೋಧ್ಯೆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್ ನಿರ್ಧಾರ

ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸದಿರಲು ಸುನ್ನಿ ವಕ್ಫ್ ಬೋರ್ಡ್ ನಿರ್ಧರಿಸಿದೆ.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ 7 ಮಂದಿ ಸದಸ್ಯರು ಇರುವ ಸುನ್ನಿ ವಕ್ಫ್ ಬೋರ್ಡ್ ಇಂದು ಸಭೆ ನಡೆಸಿತು. ಈ ಸಭೆಯಲ್ಲಿ 6 ಮಂದಿ ಮೇಲ್ಮನವಿ ಸಲ್ಲಿಸುವುದು ಬೇಡ ಎಂದು ಹೇಳಿದರೆ ಉಳಿದ ಒಬ್ಬರು ಮೇಲ್ಮನವಿ ಸಲ್ಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ:ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುನ್ನಿ ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ರಜಾಕ್ ಖಾನ್ ಸದಸ್ಯರ ಪೈಕಿ ಬಹುತೇಕ ಮಂದಿ ಮೇಲ್ಮನವಿ ಸಲ್ಲಿಸುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಬಾಬ್ರಿ ಮಸೀದಿ ಧ್ವಂಸ ಮಾಡಿ ಮುಸ್ಲಿಮರ ಪ್ರಾರ್ಥನಾ ಹಕ್ಕನ್ನು ಕಸಿದುಕೊಂಡಿದ್ದಕ್ಕೆ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ 5 ಎಕ್ರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡಿಗೆ ನೀಡಬೇಕು ಎಂದು ಆದೇಶಿಸಿದೆ. ಈ ವಿಚಾರದ ಬಗ್ಗೆ ಸ್ವಲ್ಪ ಗೊಂದಲವಿದ್ದು ಸರ್ಕಾರ ನೀಡಲಿರುವ ಜಾಗದಲ್ಲಿ ಮಸೀದಿ ನಿರ್ಮಿಸಬೇಕೇ ಅಥವಾ ಶಾಲೆ, ಆಸ್ಪತ್ರೆ ನಿರ್ಮಿಸಬೇಕೇ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದ್ರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ. 5 ಮಂದಿ ನ್ಯಾಯಾಧೀಶರು ನೀಡಿದ ಸಂವಿಧಾನ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿಂತಿಸಲಾಗುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಹಿಂದೆ ಹೇಳಿತ್ತು.

ಸುಪ್ರೀಂ ತೀರ್ಪಿನ ಮುಖ್ಯಾಂಶಗಳು:
ರಾಮ ಜನಿಸಿದ್ದು ಅಯೋಧ್ಯೆಯಲ್ಲೇ ಅನ್ನೋ ನಂಬಿಕೆ ಇದ್ದು ವಿವಾದಿತ 2.77 ಎಕ್ರೆ ರಾಮಲಲ್ಲಾಗೆ ಸೇರಿದ್ದಾಗಿದೆ. ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಬೇಕು. 3 ತಿಂಗಳಲ್ಲಿ ಟ್ರಸ್ಟ್ ಮೂಲಕವೇ ಕೇಂದ್ರ ಸರ್ಕಾರವೇ ರಾಮಮಂದಿರದ ನಿರ್ಮಿಸಬೇಕು. ಮಸೀದಿಯನ್ನು ಕೆಡವಿ ಮುಸ್ಲಿಮರ ಪ್ರಾರ್ಥನಾ ಹಕ್ಕು ಉಲ್ಲಂಘನೆಯಾಗಿಸಿದ್ದಕ್ಕೆ ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲೇ 5 ಎಕ್ರೆ ಪರ್ಯಾಯ ಭೂಮಿಯನ್ನು ನೀಡಬೇಕು. ವಿಶೇಷಾಧಿಕಾರ ಬಳಸಿ ನೀಡುವ ಪರ್ಯಾಯ ಭೂಮಿ 3 ತಿಂಗಳಲ್ಲಿ ನಿರ್ಧರಿಸಬೇಕು.

ಯಾತ್ರಿಗಳ ಅಭಿಪ್ರಾಯ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರವಾಗಿದೆ. ಮಸೀದಿಯ ಒಳಭಾಗದಲ್ಲಿ ಹಿಂದೂಗಳ ಪೂಜೆ ನಡೆಯುತಿತ್ತು. ಬ್ರಿಟಿಷರಿಂದಾಗಿ ಹಿಂದೂಗಳಿಗೆ ಪೂಜೆ ಕೈತಪ್ಪಿತ್ತು. 1856-1857ರವರೆಗೆ ನಮಾಜ್ ಬಗ್ಗೆ ದಾಖಲೆ ಇಲ್ಲ.

ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.

ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ. ನಿರ್ಮೋಹಿ ಅಖಾಡದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಪೂಜೆ ಮಾಡಿಕೊಂಡು ಬಂದಿದ್ದಾರೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರತಿನಿಧ್ಯ ನೀಡಬೇಕು.

Comments

Leave a Reply

Your email address will not be published. Required fields are marked *