ರಾಜ್ಯಾದ್ಯಂತ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ

– ಸಿಲಿಕಾನ್ ಸಿಟಿಯಾದ್ಯಂತ ಕಟ್ಟೆಚ್ಚರ
– ಒಟ್ಟು 6 ಸಾವಿರ ಪೊಲೀಸರ ನಿಯೋಜನೆ
– ಮುಂದಿನ ಆದೇಶದವರೆಗೆ ಪೊಲೀಸರಿಗೆ ರಜೆ ರದ್ದು

ಬೆಂಗಳೂರು: ಅಯೋಧ್ಯೆ ಪ್ರಕರಣದ ತೀರ್ಪು ಪ್ರಕರಟವಾಗುವ ಹಿನ್ನೆಲೆಯಲ್ಲಿ‌ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಸಿಲಿಕಾನ್ ಸಿಟಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಬೆಂಗಳೂರಿನ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ.

ಮಸೀದಿ ಮತ್ತು ಮಂದಿರಗಳ ಮುಂದೆ ಪೊಲೀಸರನ್ನು ನಿಯೋಜಿಸಲಾಗುತ್ತಿದ್ದು, ವಿಶೇಷವಾಗಿ ಮುಸ್ಲಿಂ ಏರಿಯಾಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಆದೇಶಿಸಲಾಗಿದೆ.

ಶಿವಾಜಿನಗರ, ಕೆಜಿ ಹಳ್ಳಿ, ಡಿಜೆ ಹಳ್ಳಿ, ಟ್ಯಾನರಿ ರಸ್ತೆ, ಕೆ.ಆರ್.ಮಾರ್ಕೆಟ್, ಗೋರಿ ಪಾಳ್ಯ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಸ್ತ್ ಏರ್ಪಡಿಸಲಾಗಿದೆ. ಇಂದು ರಾತ್ರಿಯಿಂದಲೇ ಜಾಗರೂಕರಾಗಿ ಬೀಟ್ ನಿರ್ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ 5 ಗಂಟೆಗೆ ಎಲ್ಲ ಪೊಲೀಸರು ಬಂದೋಬಸ್ತ್ ಜಾಗದಲ್ಲಿರುವಂತೆ ಆದೇಶ ಹೊರಡಿಸಲಾಗಿದೆ.

ಪ್ಯಾರಾ ಮಿಲಿಟರಿ ಪಡೆ, ಕೆ.ಎಸ್.ಆರ್.ಪಿ ತುಕಡಿ, ಸಿಎಆರ್ ತುಕಡಿ, ಕ್ಯುಆರ್‍ಟಿ ಟೀಮ್ ಸನ್ನದ್ಧರಾಗಿರುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ರೌಡಿಗಳನ್ನು ಸಹ ಕರೆದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ತೀರ್ಪು ನೆಪವಾಗಿಟ್ಟುಕೊಂಡು ಕೋಮು ಸೌಹಾರ್ಧತೆಗೆ ಧಕ್ಕೆ ತಂದರೆ ಸರಿ ಇರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಒಟ್ಟು 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, 50 ಕೆಎಸ್‍ಆರ್‍ಪಿ, 30 ಸಿಎಎಆರ್, 1 ಕಂಪನಿ ಆರ್‍ಎಎಫ್, ಮೂರು ಪಟ್ಲೂನ್, 12 ಸಿಆರ್‍ಪಿಎಫ್ ತುಕಡಿ, 18 ಡಿಸಿಪಿಗಳನ್ನು ನೇಮಿಸಲಾಗಿದೆ. ಅಲ್ಲದೆ ನಾಳೆಯಿಂದ ಪೊಲೀಸರಿಗೆ ರಜೆ ರದ್ದು ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ರಜೆ ನೀಡದಂತೆ ತಾಕೀತು ಮಾಡಲಾಗಿದೆ.

Comments

Leave a Reply

Your email address will not be published. Required fields are marked *