ಮುಸ್ಲಿಮರಿಗೆ ಮೆಕ್ಕಾ ಹೇಗೋ, ಹಿಂದೂಗಳಿಗೂ ಅಯೋಧ್ಯೆ ಪವಿತ್ರ ಕ್ಷೇತ್ರ: ಉಮಾ ಭಾರತಿ

ನವದೆಹಲಿ: ಮುಸ್ಲಿಂ ಬಾಂಧವರಿಗೆ ಮೆಕ್ಕಾ ಹೇಗೆ ಪವಿತ್ರ ಕ್ಷೇತ್ರವೋ, ಹಾಗೆಯೇ ಹಿಂದೂಗಳಿಗೂ ಸಹ ಅಯೋಧ್ಯೆ ಪವಿತ್ರ ಕ್ಷೇತ್ರವೆಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ, ತೀರ್ಪು ಯಾವುದೇ ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ. ಆಯೋಧ್ಯೆಯು ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಏಕೆಂದರೆ ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಾಗಿದೆ. ಅದು ಮುಸ್ಲಿಮರ ಪವಿತ್ರ ಪುಣ್ಯಕ್ಷೇತ್ರವಾಗಲು ಸಾಧ್ಯವಿಲ್ಲ. ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಆಗಿದೆ ಎಂದು ಹೇಳಿದರು.

ಕೇವಲ ಈ ಒಂದು ಸಣ್ಣ ವಿಚಾರವನ್ನು ಭೂ ವಿವಾದವನ್ನಾಗಿ ಮಾಡಿದ್ದರು. ಆದರೆ ಇಂದು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಉಂಟಾಗಿದ್ದ ಭೂ ವಿವಾದ ಸಮಸ್ಯೆ ಇತ್ಯರ್ಥವಾಗಿದೆ ಎಂದು ಉಮಾ ಭಾರತಿ ಸಂತೋಷ ವ್ಯಕ್ತಪಡಿಸಿದರು.

ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ.

ಸುಪ್ರೀಂ ಹೇಳಿದ್ದು ಏನು?
ಮಸೀದಿ ಇಸ್ಲಾಮ್‍ನ ಅವಿಭಾಜ್ಯ ಅಂಗವಲ್ಲ ಅಂತ 1994 ರ ಡಾ. ಇಸ್ಮಾಯಿಲ್ ಫಾರೂಖಿ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಏಕ ತೀರ್ಪು ನೀಡಿದ್ದರೆ, ನ್ಯಾ. ನಜೀರ್ ಭಿನ್ನ ತೀರ್ಪು ನೀಡಿದ್ದಾರೆ. 1994ರ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಮಂದಿರ, ಚರ್ಚ್ ಅಥವಾ ಮಸೀದಿಯಾಗಲಿ ಯಾವುದೇ ಧಾರ್ಮಿಕ ಸ್ಥಳಗಳನ್ನು ಸರ್ಕಾರ ವಶಕ್ಕೆ ಪಡೆಯಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ.

ತೀರ್ಪಿನಲ್ಲಿರುವ ಪ್ರಮುಖ ಅಂಶ ಏನು?
* ಮಸೀದಿಯಲ್ಲೇ ನಮಾಜ್ ಮಾಡಬೇಕು ಅಂತ ಏನಿಲ್ಲ
* ಮುಸ್ಲಿಮರು ಎಲ್ಲಿ ಬೇಕಾದ್ರೂ ನಮಾಜ್ ಮಾಡಬಹುದು
* ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇನಲ್ಲ
* ಯಾವ ಸನ್ನಿವೇಶದಲ್ಲಿ ಫಾರೂಖಿ ತೀರ್ಪು ಬಂದಿದೆ ಅನ್ನೋದು ಮುಖ್ಯ
* ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದು
* ಫಾರೂಖಿ ತೀರ್ಪಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಮಾತ್ರ ಅಭಿಪ್ರಾಯ ಕೇಳಲಾಗಿದೆ
* ಭೂಸ್ವಾಧೀನದಿಂದ ರಕ್ಷಣೆ ನೀಡುವ ಸನ್ನಿವೇಶದಲ್ಲಷ್ಟೇ ಫಾರೂಖಿ ತೀರ್ಪು ನೀಡಲಾಗಿದೆ
* 7 ಸದಸ್ಯರ ಸಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡುವ ಅಗತ್ಯತೆ ಇಲ್ಲ

ನ್ಯಾ. ನಜೀರ್ ನೀಡಿದ ಭಿನ್ನ ತೀರ್ಪೇನು?
* ಇನ್ನಿತ್ತರ ಇಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳು ನೀಡಿರೋ ತೀರ್ಪಿಗೆ ಸಹಮತವಿಲ್ಲ
* ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಅನ್ನೋದರ ಬಗ್ಗೆ ಚರ್ಚೆಯಾಗಬೇಕು
* ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು

ಏನಿದು ಪ್ರಕರಣ?
ಇಸ್ಮಾಯಿಲ್ ಫರೂಕಿ ವರ್ಸಸ್ ಭಾರತ ಸರಕಾರದ ನಡುವಿನ ಪ್ರಕರಣದ ವಿಚಾರಣೆ ವೇಳೆ 1994ರಲ್ಲಿ ಸುಪ್ರೀಂ ಕೋರ್ಟ್, ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಈ ಕಾರಣಕ್ಕೆ ಮಸೀದಿ ನಿರ್ಮಿಸಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *