ಸಚಿವ ಡಿಸಿ ತಮ್ಮಣ್ಣ ಎದುರೇ ಆಯುಕ್ತೆಗೆ ಆಯನೂರು ಅವಾಜ್

ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಕಮಿಷನರ್ ನಡುವೆ ಮಾತಿನ ಚಕಮಕಿ ನಡೆದಿದೆ.

ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ಗೆ ಎಂಎಲ್‍ಸಿ ಆಯನೂರು ಮಂಜುನಾಥ್ ಅವರು ಏಕ ವಚನದಲ್ಲಿ ಗದರಿದ್ದಾರೆ. ಇದಕ್ಕೆ ಪ್ರತಿಯಾಗಿ, ನೀವು ಏಕವಚನದಲ್ಲಿ ಮಾತನಾಡಬಾರದು ಎಂದು ಆಯನೂರು ಅವರಿಗೆ ಮಹಿಳಾ ಕಮಿಷನರ್ ತಿರುಗೇಟು ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಎದುರೇ ಈ ಜಟಾಪಟಿ ನಡೆದಿದೆ. ಯಾವ ಕಾಮಗಾರಿ ನೋಡಿದರೂ ಆಗುತ್ತಿದೆ ಎಂದು ಹೇಳುತ್ತಿದ್ದೀರಿ. ಲೈಟ್ ಇಲ್ಲದೆ ಜನ ಕತ್ತಲಲ್ಲಿ ಇದ್ದಾರೆ. ಒಂದು ದಿನ ಅಲ್ಲಿ ಇದ್ದು ನೋಡಿ. ಜನರ ಸಮಸ್ಯೆ ಕೇಳುವವರಿಲ್ಲ. ಜನರು ಸಾಯಬೇಕಾ, ಜನರ ಸಮಸ್ಯೆ ನಿನ್ನ ಬಳಿ ಹೇಳಬಾರದಾ ಎಂದು ಮಂಜುನಾಥ್ ಗದರಿದ್ದಾರೆ. ಅಲ್ಲದೆ ಏನಮ್ಮ ನಿಮಗೆ ಮರ್ಯಾದೆ ಬೇಕು. ಅಲ್ಲಿ ಜನ ಸಾಯಬೇಕು ಅಲ್ವಾ. ನೀವು ಆಯುಕ್ತೆ ನಿನಗೆ ಹೇಗೆ ಹೇಳಬೇಕಮ್ಮ ಎಂದು ಕಿಡಿಕಾರಿದ್ದಾರೆ.

ಈ ವೇಳೆ ತಿರುಗೇಟು ನೀಡಿದ ಆಯುಕ್ತೆ ಚಾರುಲತಾ, ನೀವು ಹೀಗೆ ಏಕವಚನದಲ್ಲಿ ಮಾತನಾಡಬಾರದು. ಸರಿಯಾಗಿ ಮಾತನಾಡಿ, ನಾವು ನಿಮಗೆ ಗೌರವ ನೀಡುತ್ತಿದ್ದೇನೆ ಎಂದು ಹೇಳಿ ನಿಮ್ಮ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಕಮಿಷನರ್ ಕೂಡ ಸಿಡಿಮಿಡಿಗೊಂಡಿದ್ದಾರೆ. ಈ ವೇಳೆ ಎಂಎಲ್‍ಸಿ, ಆಯ್ತು ತಗೋ ಆ್ಯಕ್ಷನ್, ನಾನು ನೋಡ್ತೀನಿ ಎಂದು ಮಂಜುನಾಥ್ ಮತ್ತೆ ಗದರಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ತಮ್ಮಣ್ಣ ಸಮಾಧಾನಪಡಿಸಿದರು.

Comments

Leave a Reply

Your email address will not be published. Required fields are marked *