ಉಡುಪಿಯಲ್ಲಿ ಕಾನೂನು ಪಾಲಿಸದವರನ್ನು ಅಟ್ಟಾಡಿಸಿದ ಕೊರೊನಾ

ಉಡುಪಿ: ಜಿಲ್ಲೆಯಲ್ಲಿ ಲಾಕ್‍ಡೌನ್‍ನಲ್ಲಿ ಮಾಸ್ಕ್ ಧರಿಸಿದೆ ಬೀದಿಗಿಳಿದ ಜನರನ್ನು ಕೊರೊನಾ ಅಟ್ಟಾಡಿಸಿಕೊಂಡು ಓಡಿಸಿದೆ.

ಸದಾ ವಿಭಿನ್ನ ರೀತಿಯಲ್ಲಿ ಜನ ಜಾಗೃತಿ ಮೂಡಿಸುತ್ತಾ ಬಂದಿರುವ ಉಡುಪಿಯ ಸಮಾಜಸೇವಕ ನಿತ್ಯಾನಂದ ಒಳಕಾಡು ಇಂಥದ್ದೊಂದು ಅಣಕು ಪ್ರದರ್ಶನವನ್ನು ಉಡುಪಿಯಲ್ಲಿ ಮಾಡಿದರು. ಮಾರುತಿ ವೀಥಿಕಾದ ತನ್ನ ಕಚೇರಿಯಲ್ಲಿ ಕೊರೊನಾ ವೈರಸ್ ವೇಷವನ್ನು ನಿತ್ಯಾನಂದ ಒಳಕಾಡು ತೊಟ್ಟು, ಉದ್ದುದ್ದ ಕೈ ಕಾಲು ಭಯಾನಕವಾದ ವೇಷಭೂಷಣ, ತಲೆಗೆ ಚೂಪು ಚೂಪಿನ ಒಂದು ವಿಭಿನ್ನ ಹೆಲ್ಮೆಟ್ ಹಾಕಿಕೊಂಡು ರಸ್ತೆಗೆ ಇಳಿದಿದ್ದರು.

ಮಾಸ್ಕ್ ಹಾಕದೆ ಓಡಾಡುತ್ತಿರುವವರು ಮೇಲೆ ಕೊರೊನಾ ವೈರಸ್ ವೇಷಧಾರಿ ಅಟ್ಯಾಕ್ ಮಾಡಿದ್ದು, ಮಾಸ್ಕ್ ಧರಿಸದೆ ಹೊರಗೆ ಓಡಾಡಬಾರದು ಎಂದು ಕಿವಿಮಾತು ಹೇಳಿದರು. ರೆಸಿಡೆನ್ಸಿಯಲ್ ಏರಿಯಾ, ಅಂಗಡಿ ಮುಂಗಟ್ಟುಗಳ ಬಳಿ ನಿತ್ಯಾನಂದ ಒಳಕಾಡು ಸಂಚಾರ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದವರನ್ನೂ ಅಡ್ಡಗಟ್ಟಿದ ಪ್ರಸಂಗ ಕೂಡ ನಡೆಯಿತು. ಕೊರೊನಾ ವೈರಸ್ ಹೇಗೆ ಮನುಷ್ಯನನ್ನು ಆವರಿಸುತ್ತದೆ? ನಂತರ ಸೋಂಕಿತ ವ್ಯಕ್ತಿ ಪಡುವ ಪಾಡು ಏನು ಎಂಬುದನ್ನು ನಿತ್ಯಾನಂದ ಒಳಕಾಡು ಮತ್ತು ತಂಡವರು ಪರಿಣಾಮಕಾರಿಯಾಗಿ ನಟಿಸಿ ತೋರಿಸಿದ್ದಾರೆ.

ಕೊರೊನಾ ಸೋಂಕು ತಗುಲಿದ ಜನರು ಏನೆಲ್ಲಾ ಕಷ್ಟಪಡುತ್ತಾರೆ? ಎಷ್ಟೆಲ್ಲಾ ಹಿಂಸೆ ಅನುಭವಿಸುತ್ತಾರೆ ಎಂಬುದನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ತೋರಿಸಲಾಯಿತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಹೇಗೆ ಸ್ಯಾನಿಟೈಸರ್ ಬಳಸಬೇಕು ಎಂಬುದನ್ನು ಈ ತಂಡ ಜನತೆಯ ಮುಂದೆ ಪ್ರದರ್ಶನ ಮಾಡಿತು.

ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ಉಡುಪಿಯಲ್ಲಿ ಸಾಕಷ್ಟು ಜನ ಜಾಗೃತರಾಗಿದ್ದಾರೆ. ಕೆಲವರು ಸರಕಾರದ ಆರೋಗ್ಯ ಇಲಾಖೆಯ ಗೈಡ್ ಲೈನ್ಸ್‍ಗಳನ್ನು ಪಾಲಿಸುತ್ತಿಲ್ಲ. ಅನಗತ್ಯವಾಗಿ ರಸ್ತೆಗೆ ಬರುತ್ತಿದ್ದಾರೆ. ಅಂಗಡಿಗಳ ಮುಂದೆ ಗುಂಪು ಸೇರಿಕೊಂಡು ಖರೀದಿಯಲ್ಲಿ ತೊಡಗುತ್ತಿದ್ದಾರೆ. ಜನಜಾಗೃತಿ ಆಗಬೇಕೆಂಬ ಉದ್ದೇಶದಿಂದ, ಸಾಮಾಜಿಕ ಕಳಕಳಿ ಇಟ್ಟುಕೊಂಡು ಈ ಅಣಕು ಪ್ರದರ್ಶನ ಮಾಡಿರುವುದಾಗಿ ಹೇಳಿದರು.

ನಟ ಶ್ರೀಪಾದ ಭಟ್ ಮತ್ತು ನಟಿ ಅಶ್ವಿನಿ ಮಾತನಾಡಿ, ಕೊರೊನಾ ವೈರಸ್ ಭೂಮಿಯಲ್ಲಿ ಪರ್ಮನೆಂಟ್ ಇರುವ ಸೋಂಕು. ಅದರ ವಿರುದ್ಧ ದಿನನಿತ್ಯ ಜಾಗೃತರಾಗಿರಬೇಕು. ಆರೋಗ್ಯ ಇಲಾಖೆಯ ಎಲ್ಲಾ ನಿಯಮ ತಪ್ಪದೆ ಪಾಲಿಸಿದರೆ ರೋಗದಿಂದ ದೂರ ಇರಬಹುದು ಎಂದರು. ಅಲ್ಲದೇ ಈ ಜನಜಾಗೃತಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ವಿಷಯ ಎಂದರು.

Comments

Leave a Reply

Your email address will not be published. Required fields are marked *