ಲೆಬನಾನ್‍ಗೆ ಬರಬೇಡಿ – ತನ್ನ ನಾಗರಿಕರಿಗೆ ಭಾರತ ರಾಯಭಾರ ಕಚೇರಿ ಸೂಚನೆ

ಬೈರುತ್: ಇಸ್ರೇಲ್‌ (Israel) ಸೇನೆಯಿಂದ ವೈಮಾನಿಕ ದಾಳಿ ಮತ್ತು ಪೇಜರ್‌ಗಳ ಸ್ಫೋಟದ ನಂತರ ಲೆಬನಾನ್‍ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಮುಂದಿನ ಸೂಚನೆ ಬರುವವರೆಗೂ ಲೆಬನಾನ್‍ಗೆ (Lebanon) ಪ್ರಯಾಣಿಸದಂತೆ ಬೈರುತ್‍ನಲ್ಲಿರುವ ಭಾರತದ ರಾಯಭಾರ ಕಚೇರಿ (Indian Embassy) ತನ್ನ ನಾಗರಿಕರಿಗೆ ಸೂಚನೆ ನೀಡಿದೆ.

ಲೆಬನಾನ್‍ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಸಲಹೆ ನೀಡಲಾಗಿದೆ. ಕಾರಣಾಂತರಗಳಿಂದ ಲೆಬನಾನ್‍ನಲ್ಲೇ ಉಳಿದ ಜನ ತೀವ್ರ ಎಚ್ಚರಿಕೆಯಿಂದ ಹಾಗೂ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಬೈರುತ್‍ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಸಂಪರ್ಕಕ್ಕಾಗಿ ಇಮೇಲ್ ಐಡಿ cons.beirut@mea.gov.in ಅಥವಾ ತುರ್ತು ದೂರವಾಣಿ ಸಂಖ್ಯೆ +96176860128ಗೆ ಕರೆ ಮಾಡುವಂತೆ ತಿಳಿಸಲಾಗಿದೆ. ಇದನ್ನೂ ಓದಿ: ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ

ಸೆ.24 ರಂದು ಇಸ್ರೇಲ್ ದಾಳಿಯಿಂದ ಲೆಬನಾನ್‍ನಲ್ಲಿ ಕನಿಷ್ಠ 558 ಜನ ಸಾವಿಗೀಡಾಗಿದ್ದರು. ಸಾವನ್ನಪ್ಪಿದ 558 ಜನರಲ್ಲಿ 50 ಮಕ್ಕಳು ಸೇರಿದ್ದಾರೆ. ದಾಳಿಯಲ್ಲಿ 1,835 ಜನರು ಗಾಯಗೊಂಡಿದ್ದರು ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿತ್ತು.

ಇಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್ ಫೋರ್ಸ್‌ನ ಕಮಾಂಡರ್ ಇಬ್ರಾಹಿಂ ಮುಹಮ್ಮದ್ ಕಬಿಸಿಯನ್ನು ಹತ್ಯೆಯಾಗಿದ್ದಾಗಿ ಇಸ್ರೇಲ್ ತಿಳಿಸಿತ್ತು.

ದಕ್ಷಿಣ ಗಡಿಯಲ್ಲಿರುವ ಗಾಜಾದಲ್ಲಿ ಪ್ಯಾಲೆಸ್ತೀನಿಯನ್ ಬಂಡುಕೋರರ ಗುಂಪು ಹಮಾಸ್ ವಿರುದ್ಧ ಸುಮಾರು 12 ತಿಂಗಳ ಯುದ್ಧದ ನಂತರ, ಇಸ್ರೇಲ್ ತನ್ನ ಗಮನವನ್ನು ಉತ್ತರದ ಗಡಿಯತ್ತ ಬದಲಿಸಿದೆ. ಹಿಜ್ಬುಲ್ಲಾ ಇಸ್ರೇಲ್ ವಿರುದ್ಧ ರಾಕೆಟ್‍ಗಳನ್ನು ಹಾರಿಸುತ್ತಾ ಹಮಾಸ್‍ಗೆ ಬೆಂಬಲ ನೀಡುತ್ತಿದೆ. ಇದಕ್ಕೆ ಇರಾನ್ ಬೆಂಬಲವೂ ಇದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ರಷ್ಯಾ ಮೇಲೆ ಕ್ರೂಸ್‌ ಕ್ಷಿಪಣಿ ದಾಳಿಗೆ ಉಕ್ರೇನ್‌ ಪ್ಲ್ಯಾನ್‌ – ಉನ್ನತಾಧಿಕಾರಿಗಳ ತುರ್ತುಸಭೆ ಕರೆದ ಪುಟಿನ್‌