ಡಬ್ಬಲ್ ಶರ್ಟ್ ಹಾಕೋ ಆಟೋ ಚಾಲಕರಿಗೆ ನಾಳೆಯಿಂದ 500 ರೂ. ದಂಡ

– ಪುನೀತ್, ಮಹೇಶ್ ಬಾಬು ಸ್ಟೈಲ್ ಮಾಡ್ಬೇಡಿ ಎಂದು ಎಸ್‍ಐ ವಾರ್ನ್

ಉಡುಪಿ: ಪುನೀತ್ ರಾಜ್ ಕುಮಾರ್, ಪ್ರಿನ್ಸ್ ಮಹೇಶ್ ಬಾಬು ಸ್ಟೈಲ್ ಮಾಡಿಕೊಂಡು ಓಡಾಡುವ ಆಟೋ ಚಾಲಕರಿಗೆ ಉಡುಪಿಯಲ್ಲಿ ಫೈನ್ ಬೀಳುತ್ತೆ. ಉಡುಪಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಇರುವ ಪೊಲೀಸರು ಡಬ್ಬಲ್ ಶರ್ಟ್ ಹಾಕುವ ಆಟೋ ಡ್ರೈವರ್‌ಗಳಿಗೆ ಪಾಠ ಮಾಡುತ್ತಿದ್ದಾರೆ.

ಉಡುಪಿಯಲ್ಲಿ ಆಟೋ ಚಾಲಕರು ಒಳಗೊಂದು ಶರ್ಟ್ ಹಾಕಿ, ಹೊರಗೆ ಖಾಕಿ ಶರ್ಟ್  ಓಪನ್ ಬಿಟ್ಟುಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಫುಲ್ ಹ್ಯಾಂಡ್ ಶರ್ಟ್ ಮೇಲೆ ಹಾಫ್ ಖಾಕಿ ಶರ್ಟ್ ಹಾಕಿಕೊಂಡು ಅದನ್ನು ಓಪನ್ ಬಿಟ್ಟುಕೊಂಡು ಆಟೋ ಡ್ರೈವರ್‌ಗಳು ಆಟೋ ಚಾಲನೆ ಮಾಡುತ್ತಿದ್ದಾರೆ. ಡಬ್ಬಲ್ ಶರ್ಟ್ ಹಾಕಿಕೊಂಡು ಬಾಡಿಗೆ ಮಾಡುವ ಆಟೋ ಡ್ರೈವರ್‌ಗಳನ್ನು ಉಡುಪಿ ಪೊಲೀಸರು ಬೆನ್ನು ಬಿದ್ದಿದ್ದಾರೆ.

ಮೋಟಾರು ವಾಹನ ಕಾಯ್ದೆಯ ಪ್ರಕಾರ ಆಟೋ ಚಾಲಕರು ಕೇವಲ ಒಂದು ಖಾಕಿ ಶರ್ಟ್ ಮಾತ್ರ ಧರಿಸಿರಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಟೊಂಕ ಕಟ್ಟಿದ್ದಾರೆ. ನಗರದಲ್ಲಿ ಡಬ್ಬಲ್ ಶರ್ಟ್ ಹಾಕಿಕೊಂಡು ಮೋಟಾರು ಕಾಯ್ದೆ ಉಲ್ಲಂಘಿಸುವವರನ್ನು ಟ್ರಾಫಿಕ್ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ರಿಕ್ಷಾದಿಂದ ಇಳಿಸಿ ಬಟನ್ ಹಾಕಿಸಿ ಪೊಲೀಸರು ಪಾಠ ಹೇಳಿ ಕಳುಹಿಸುತ್ತಿದ್ದಾರೆ.

ಉಡುಪಿಯ ಅಂಬಲಪಾಡಿ ಜಂಕ್ಷನ್, ಕಲ್ಸಂಕ ಜಂಕ್ಷನ್, ಮಣಿಪಾಲ ಡಯಾನ ಸರ್ಕಲ್ ಸಿಟಿ ಬಸ್ ನಿಲ್ದಾಣ ಸೇರಿದಂತೆ ಜನ ಹೆಚ್ಚು ಓಡಾಡುವ ಆಟೋ ನಿಲ್ದಾಣಗಳು ಇರುವಲ್ಲೇ ಪೊಲೀಸರು ಶಿಸ್ತು ಪಾಲಿಸುವಂತೆ ಮಾಡಲು ಹೊರಟಿದ್ದಾರೆ. ರೌಡಿಗಳು ಡಬ್ಬಲ್ ಶರ್ಟ್ ಹಾಕಿ ಓಡಾಡುತ್ತಾರೆ. ಭಿಕ್ಷುಕರು ಎರಡು ಮೂರು ಶರ್ಟ್ ಹಾಕಿ ಓಡಾಡುತ್ತಾರೆ. ಆಟೋ ಚಾಲಕರಿಗೆ ಗೌರವವಾಗಿದೆ ನೀವು ಜನಸೇವೆ ಮಾಡುವವರು. ನೀವು ಶಿಸ್ತಿನಿಂದ ಇದ್ದು ಗ್ರಾಹಕರಿಗೆ ಉತ್ತಮ ಸೇವೆ ಕೊಡಿ ಎಂದು ಎಸ್‍ಐ ಅಬ್ದುಲ್ ಖಾದರ್ ಪಾಠ ಮಾಡಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್‍ಐ ಅಬ್ದುಲ್ ಖಾದರ್, ಮೇಲ್ನೋಟಕ್ಕೆ ಕಾಣುವ ಕಾನೂನು ಉಲ್ಲಂಘನೆಗೆ ದಂಡ ಹಾಕುತ್ತಿದ್ದೇವೆ. ಹೆಲ್ಮೆಟ್, ಸೀಟ್ ಬೆಲ್ಟ್ ಗಳನ್ನು ಹಾಕದವರಿಗೆ ಫೈನ್ ಹಾಕಿದ್ದೇವೆ. ಬುಧವಾರ ಅಂದರೆ ನಾಳೆಯಿಂದ ಡಬ್ಬಲ್ ಶರ್ಟ್ ಹಾಕುವವರಿಗೆ 500 ರೂಪಾಯಿ ದಂಡ ಹಾಕುತ್ತೀವಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *