ಆಟೋ ಚಾಲಕನಿಂದ ಮಹಿಳಾ ಟೆಕ್ಕಿಗೆ ಕಿರುಕುಳ

ಹೈದರಾಬಾದ್: ಆಟೋ ಚಾಲಕನೋರ್ವ ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಬೆಳಗಿನ ಜಾವ ಆಟೋ ಹತ್ತಿದ್ದ ಮಹಿಳೆಯನ್ನು ಆಕೆಯ ಹಾಸ್ಟೆಲ್ ಬದಲಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾನೆ.

ಶಿವರಾಜ್ (30) ಕಿರುಕುಳ ನೀಡಿದ್ದ ಆಟೋ ಚಾಲಕ. ಟೆಕ್ಕಿ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ನಿವಾಸಿಯಾಗಿದ್ದು, ಮಂಗಳವಾರ ಬೆಳಗ್ಗೆ ಹೈದರಾಬಾದಿಗೆ ಬಂದಿದ್ದಾರೆ. ಬೆಳಗಿನ ಜಾವ ಸುಮಾರು 4.15ಕ್ಕೆ ಮೆದಪಲ್ಲಿ ಪೊಲೀಸ್ ಲಿಮಿಟ್‍ನಲ್ಲಿರುವ ತಮ್ಮ ಹಾಸ್ಟೆಲ್‍ಗೆ ಹೋಗಲು ಆಟೋ ಹತ್ತಿದ್ದಾರೆ. ಚಾಲಕ ಹಾಸ್ಟೆಲ್ ಬದಲಾಗಿ ಮಹಿಳೆಯನ್ನು ಪೀರ್ಜಾಡಿಗುಡಾದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಚಾಲಕ ಮಾರ್ಗ ಬದಲಿಸಿ ಕೂಡಲೇ ಮಹಿಳೆ ಆತನನ್ನು ಪ್ರಶ್ನೆ ಮಾಡಿದ್ದಾರೆ. ಪ್ರಶ್ನಿಸುತ್ತಿದ್ದಂತೆ ಟೆಕ್ಕಿಯ ಬ್ಯಾಗ್ ಕಸಿದುಕೊಂಡಿದ್ದಾನೆ.

                                                                                                           ಸಾಂದರ್ಭಿಕ ಚಿತ್ರ

ಮನೆ ಬಳಿ ತೆರಳುತ್ತಿದ್ದಂತೆ ಶಿವರಾಜ್ ಮಹಿಳೆಯನ್ನು ಒಳ ಬರುವಂತೆ ಬಲವಂತ ಮಾಡಿದ್ದಾನೆ. ಟೆಕ್ಕಿ ಭಯಗೊಂಡು ಕಿರುಚಾಡಿದ್ದರಿಂದ ಪೀರ್ಜಾಡಿಗುಡಾ ಮುಖ್ಯರಸ್ತೆಯಲ್ಲಿ ಮಹಿಳೆಯನ್ನು ಬಿಟ್ಟು ಹೋಗಿದ್ದಾನೆ. ಈ ವೇಳೆ ಬಂದ ಬಸ್ ಹತ್ತಿ ಮಹಿಳೆ ಹಾಸ್ಟೆಲ್ ಬಳಿ ಬಂದಿದ್ದಾರೆ. ಬಸ್ ಫಾಲೋ ಮಾಡಿದ್ದ ಚಾಲಕ, ಮಹಿಳೆಯನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ.

ಹಾಸ್ಟೆಲ್ ಸೇರಿದ ಟೆಕ್ಕಿ ನಡೆದ ವಿಷಯವನ್ನು ತನ್ನ ಗೆಳತಿ ಮತ್ತು ಅಲ್ಲಿಯ ಮಾಲೀಕ ತೇಜಸ್ವರ್ ರೆಡ್ಡಿಗೆ ತಿಳಿಸಿದ್ದಾರೆ. ನಂತರ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅನ್ವಯ ಐಪಿಸಿ ಸೆಕ್ಷನ್ 354ಸಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *