Author: admin

  • ರಾಜ್ಯದ ಹವಾಮಾನ ವರದಿ 31-10-2025

    ರಾಜ್ಯದ ಹವಾಮಾನ ವರದಿ 31-10-2025

    ಮೊಂಥಾ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗಿದೆ. ಇಂದು ಸಹ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 28-19
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 25-21
    ಮೈಸೂರು: 28-22

    ಮಂಡ್ಯ: 27-21
    ಮಡಿಕೇರಿ: 27- 19
    ರಾಮನಗರ: 27-21
    ಹಾಸನ: 25-20
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 26-20

    ಕೋಲಾರ: 26-21
    ತುಮಕೂರು: 26-21
    ಉಡುಪಿ: 28-24
    ಕಾರವಾರ: 29-26
    ಚಿಕ್ಕಮಗಳೂರು: 23-19
    ದಾವಣಗೆರೆ: 28-22

    ಹುಬ್ಬಳ್ಳಿ: 27-22
    ಚಿತ್ರದುರ್ಗ: 27-21
    ಹಾವೇರಿ: 28-22
    ಬಳ್ಳಾರಿ: 29-23
    ಗದಗ: 27-22
    ಕೊಪ್ಪಳ: 28-23

    ರಾಯಚೂರು: 28-23
    ಯಾದಗಿರಿ: 27-23
    ವಿಜಯಪುರ: 30-23
    ಬೀದರ್: 27-23
    ಕಲಬುರಗಿ: 27-23
    ಬಾಗಲಕೋಟೆ: 29-22

  • ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    -‌ ಪಂದ್ಯ ಗೆಲ್ಲಿಸಿ ಮೈದಾನದಲ್ಲೇ ಕಣ್ಣೀರಿಟ್ಟ ರೋಡ್ರಿಗ್ಸ್‌

    ಮುಂಬೈ: ಜೆಮಿಮಾ ರೋಡ್ರಿಗ್ಸ್‌ ಅವರ ಅಜೇಯ ಶತಕ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಜವಾಬ್ದಾರಿಯುತ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾವನ್ನ 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ 3ನೇ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್‌ ಫೈನಲ್ ಪ್ರವೇಶಿಸಿದೆ. 2008ರಲ್ಲಿ ಭಾರತ ಮೊದಲ ಬಾರಿ ಫೈನಲ್‌ ಪ್ರವೇಶಿಸಿದಾಗ ಆಸೀಸ್‌ ವಿರುದ್ಧವೇ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 9 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಇದೀಗ ಸೆಮಿಸ್‌ನಲ್ಲಿ ಸೋಲಿಸಿ ಆಸೀಸ್‌ ತಂಡವನ್ನ ಮನೆಗೆ ಕಳುಹಿಸಿದೆ.

    ಈ ಮೂಲಕ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಆಘಾತಕಾರಿ ಸೋಲಿಗೆ ಇದೇ ಟೂರ್ನಿಯಲ್ಲಿ ಭಾರತ ತಕ್ಕ ಉತ್ತರ ನೀಡಿದೆ. ನವೆಂಬರ್ 2ರಂದು ನಡೆಯುವ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಬೇಕಿದೆ.

    ವಿಶ್ವದಾಖಲೆಯ ಜಯ
    ಗುರುವಾರ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್ ಗಳಲ್ಲಿ 338 ರನ್ ಗಳಿಗೆ ಆಲೌಟ್ ಆಯಿತು. ಇದನ್ನು ಭಾರತ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ಇನ್ನೂ 48.3 ಓವರ್‌ಗಳಲ್ಲೇ 341 ರನ್‌ ಗಳಿಸಿ ಗೆಲುವು ಸಾಧಿಸಿತು. ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಚೇಸಿಂಗ್‌ ಮಾಡಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇದೀಗ ಭಾರತದ ವನಿತೆಯರ ಪಾಲಾಗಿದೆ.

    ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭಿಕ 2 ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಆದರೆ, ಜೆಮಿಮಾ ರೊಡ್ರಿಗಸ್‌ (127*) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (89 ರನ್‌) ಅವರ 167 ರನ್‌ಗಳ ದೊಡ್ಡ ಜೊತೆಯಾಟದ ತಂಡಕ್ಕೆ ಬಲ ನೀಡಿತು.

    ಜೆಮಿಮಾ ರೋರಿಂಗ್‌ ಶತಕ
    ಭಾರತ ತಂಡ, 13 ರನ್‌ ಇದ್ದಾಗ ಶಫಾಲಿ ವರ್ಮಾ ಹಾಗೂ 59 ರನ್‌ಗೆ ಸ್ಮೃತಿ ಮಂಧಾನಾ ಅವರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಜೆಮಿಮಾ ರೊಡ್ರಿಗ್ಸ್‌ 134 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 127* ರನ್‌ ಗಳಿಸಿ ಭಾರತ ತಂಡವನ್ನ ಗೆಲುವಿನ ದಡ ಸೇರಿಸಿದರು. ಅಲ್ಲದೇ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೊತೆಗೂಡಿ 167 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಇದರೊಂದಿಗೆ ದೀಪ್ತಿ ಶರ್ಮಾ 24 ರನ್‌, ರಿಚಾ ಘೋಷ್‌ 26 ರನ್‌, ಅಮನ್‌ ಜೋತ್‌ ಕೌರ್‌ 15 ರನ್‌ ಕೊಡುಗೆ ನೀಡಿದರು.

    338 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯಾ
    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತವನ್ನೇ ಕಲೆ ಹಾಕಿತ್ತು. ಫೋಬೆ ಲಿಚ್‌ಫೀಲ್ಡ್‌ 119 ರನ್‌, ಎಲಿಸ್‌ ಪೆರ್ರಿ 77 ರನ್‌ ಹಾಗೂ ಆಶ್ಲೆ ಗಾರ್ಡ್ನರ್ ಸ್ಫೋಟಕ 63 ರನ್‌ಗಳ ನೆರವಿನಿಂದ ಆಸೀಸ್‌ ವನಿತಾ ತಂಡ 49.5 ಓವರ್‌ಗಳಿಗೆ 338 ರನ್‌ ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಭಾರತ ಮಹಿಳಾ ತಂಡಕ್ಕೆ 339 ರನ್‌ಗಳ ಕಠಿಣ ಗುರಿ ನೀಡಿತ್ತು.

    ಸಂಕ್ಷಿಪ್ತ ಸ್ಕೋರ್
    ಆಸ್ಟ್ರೇಲಿಯಾ
    49.5 ಓವರ್ ಗಳಲ್ಲಿ 338/10, ಲಿಚ್ ಫೀಲ್ಡ್ 119(93), ಎಸಿಸ್ ಪೆರ್ರಿ 77(88), ಆ್ಯಶ್ಲೆ ಗಾರ್ಡನರ್ 63 (45), ಶ್ರೀಚರಣಿ 49ಕ್ಕೆ 2, ದೀಪ್ತಿ ಶರ್ಮಾ 73ಕ್ಕೆ 2

    ಭಾರತ ತಂಡ
    48.3 ಓವರ್ ಗಳಲ್ಲಿ 341/1, ಜೆಮಿಮಾ ರೋಡ್ರಿಗಸ್ ಅಜೇಯ 127 (134), ಹರ್ಮನ್ ಪ್ರೀತ್ ಕೌರ್ 89(88), ಕಿಮ್ ಗರ್ಥ್ 46ಕ್ಕೆ 2, ಅನಾಬೆಲ್ ಸದರ್ ಲ್ಯಾಂಡ್ 69ಕ್ಕೆ 2

  • ವಲಸಿಗರ ಜಾಬ್ ಲೈಸೆನ್ಸ್ ಸ್ವಯಂ ನವೀಕರಣ ವ್ಯವಸ್ಥೆ ರದ್ದುಗೊಳಿಸಿದ ಯುಎಸ್

    ವಲಸಿಗರ ಜಾಬ್ ಲೈಸೆನ್ಸ್ ಸ್ವಯಂ ನವೀಕರಣ ವ್ಯವಸ್ಥೆ ರದ್ದುಗೊಳಿಸಿದ ಯುಎಸ್

    ವಾಷಿಂಗ್ಟನ್: ಹೆಚ್-1ಬಿ ವೀಸಾ (H-1B Visa) ಶುಲ್ಕ ಏರಿಸಿದ ಅಮೆರಿಕ ಇದೀಗ ವಲಸಿಗರ ಕೆಲಸದ ಪರವಾನಗಿಯ ಸ್ವಯಂ ನವೀಕರಣ ವ್ಯವಸ್ಥೆಯನ್ನು ರದ್ದುಗೊಳಿಸಿದೆ.

    ಅಮೆರಿಕದ (America) ಗೃಹ ಭದ್ರತಾ ಇಲಾಖೆ ವಲಸೆ ಕಾರ್ಮಿಕರ ಉದ್ಯೋಗಾಧಿಕಾರ ದಾಖಲೆಗಳ ಸ್ವಯಂಚಾಲಿತ ನವೀಕರಣ ವ್ಯವಸ್ಥೆಯನ್ನು ರದ್ದುಪಡಿಸಿದೆ. ಇದರ ಪರಿಣಾಮ ಭಾರತೀಯ ವಲಸಿಗರ ಮೇಲೆ ಸಾಧ್ಯತೆ ಇದೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್

    ಹೊಸ ನಿಯಮದ ಪ್ರಕಾರ, ಅಕ್ಟೋಬರ್ 30 ರಿಂದ ಅಥವಾ ಅದರ ನಂತರ ತಮ್ಮ ಎಂಪ್ಲಾಯ್‌ಮೆಂಟ್ ಅಥಾರಿಟಿ ಡಾಕ್ಯುಮೆಂಟ್ (EADs) ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರು ಇನ್ನು ಮುಂದೆ ಸ್ವಯಂಚಾಲಿತ ವಿಸ್ತರಣೆಗೆ ಅರ್ಹರಾಗಿರುವುದಿಲ್ಲ.

    ಇನ್ನು, ಆರು ವರ್ಷಗಳ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. ಈ ವೇಳೆ ಚೀನಾ ವಸ್ತುಗಳ ಮೇಲೆ ಹೇರಿರುವ 57% ರಷ್ಟು ಟ್ಯಾರಿಫ್ ಅನ್ನು 47% ಗೆ ಇಳಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.

  • Bihar Elections 2025 | ಶುಭ ಶುಕ್ರವಾರ NDA ಪ್ರಣಾಳಿಕೆ ಬಿಡುಗಡೆ – ಭಾರೀ ಕೊಡುಗೆ ನಿರೀಕ್ಷೆ!

    Bihar Elections 2025 | ಶುಭ ಶುಕ್ರವಾರ NDA ಪ್ರಣಾಳಿಕೆ ಬಿಡುಗಡೆ – ಭಾರೀ ಕೊಡುಗೆ ನಿರೀಕ್ಷೆ!

    ಪಾಟ್ನಾ: ಬಿಹಾರ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಉಭಯ ಮೈತ್ರಿಕೂಟಗಳ ಪ್ರಚಾರದ ಬಿರುಸು ಜೋರಾಗುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿರುವ ಎನ್‌ಡಿಎ ಮೈತ್ರಿಕೂಟ ಅ.31 ರಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ.

    ಬೆಳಗ್ಗೆ 9:30ರ ಸುಮಾರಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೈತ್ರಿಕೂಟದ ಎಲ್ಲಾ ನಾಯಕರ ಸಮ್ಮುಖದಲ್ಲಿ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ.

    ಏನಿದೆ ನಿರೀಕ್ಷೆ?
    ವರದಿಗಳ ಪ್ರಕಾರ, ಎನ್‌ಡಿಎ ಮೈತ್ರಿಕೂಟದ ಪ್ರಣಾಳಿಕೆಯು ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ, ಉದ್ಯೋಗ, ಮಹಿಳಾ ಸಬಲೀಕರಣ ಮೇಲೆ ಕೇಂದ್ರೀಕೃತವಾಗಿದೆ. ಅಲ್ಲದೇ ಮೂಲ ಸೌಕರ್ಯ, ಗ್ರಾಮೀಣ ಅಭಿವೃದ್ಧಿಗಳಿಗೂ ವಿಶೇಷ ಒತ್ತು ನೀಡಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಮಹಾಘಟಬಂಧನ್‌ ಭರವಸೆ ಏನಿದೆ?
    ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ‘ಬಿಹಾರ ಕಾ ತೇಜಸ್ವಿ ಪ್ರಾಣ್’ ಎಂಬ ಶೀರ್ಷಿಕೆಯಡಿ ಈಗಾಗಲೇ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

    * ಸರ್ಕಾರ ರಚಿಸಿದ 20 ದಿನಗಳಲ್ಲಿ ರಾಜ್ಯದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ.
    * ‘ಮೈ-ಬೆಹಿಂ ಮಾನ್ ಯೋಜನೆ’ ಅಡಿಯಲ್ಲಿ, ಡಿಸೆಂಬರ್ 1 ರಿಂದಲೇ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವು.
    * ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರುವ ಭರವಸೆ
    * ವಕ್ಫ್ (ತಿದ್ದುಪಡಿ) ಕಾಯ್ದೆ ಕಸದ ಬುಟ್ಟಿಗೆ
    * ಪಂಚಾಯಿತಿ ಪ್ರತಿನಿಧಿಗಳ ವಿಮೆ ಭತ್ಯೆ ಡಬಲ್‌ ಸೇರಿದಂತೆ ಹಲವು ಭರವಸೆಗಳನ್ನ ನೀಡಿದೆ.

    ಇದೇ ನವೆಂಬರ್‌ 6 ಮತ್ತು 11 ರಂದು 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.

  • ಸಂಪುಟ ಸಭೆಯಲ್ಲಿ ಮಹದೇವಪ್ಪ ಕೂಗಾಟ, ಬಾಕಿ ಕೇಳಿದ್ದಕ್ಕೆ ಜಾರ್ಜ್ ಮೇಲೆ ಸಿಟ್ಟು – ಸಿಎಂ ಹೇಳಿದ್ದೇನು?

    ಸಂಪುಟ ಸಭೆಯಲ್ಲಿ ಮಹದೇವಪ್ಪ ಕೂಗಾಟ, ಬಾಕಿ ಕೇಳಿದ್ದಕ್ಕೆ ಜಾರ್ಜ್ ಮೇಲೆ ಸಿಟ್ಟು – ಸಿಎಂ ಹೇಳಿದ್ದೇನು?

    ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಇವತ್ತು ಸಿಎಂ ಆಪ್ತ ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ರೋಷಾವೇಶ ಜೋರಾಗಿತ್ತು ಎನ್ನಲಾಗಿದೆ. ಇಬ್ಬರು ಸಿಎಂ ಆಪ್ತ ಸಚಿವರ ನಡುವೆ ಕಾವೇರಿದ ಚಕಮಕಿ ಆಗಿದ್ದು, ಸಿಎಂ (Siddaramaiah) ಇಬ್ಬರನ್ನ ಸಮಾಧಾನಪಡಿಸಿದ್ರು ಎಂದು ಮೂಲಗಳಿಂದ ಗೊತ್ತಾಗಿದೆ.p

    ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಜಟಾಪಟಿ ನಡೆದಿದ್ದು, ನಾನು ಎದ್ದು ಹೊರಟೇ ಬಿಡುತ್ತೇನೆ ಎಂದು ಹೆಚ್.ಸಿ ಮಹದೇವಪ್ಪ ಕೂಗಾಡಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿ ಹಣ ಸರಿಯಾಗಿ ಬಳಕೆ ಆಗುತ್ತಿಲ್ಲ, ಹಂಚಿಕೆ ಆದ ಹಣವನ್ನ ಬೇರೆ ಕಡೆ ಬಳಕೆ ಮಾಡುತ್ತಿದ್ದೀರಿ. ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಈಗ ಹಣ ಕೊಡಿ ಅಂದ್ರೆ ಅಂತಾ ಜೋರು ದ್ಚನಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 1,545 ಕೋಟಿ ನೆರೆ ಪರಿಹಾರ ಕೇಳಲು ಕೇಂದ್ರಕ್ಕೆ ಮನವಿ: ಕ್ಯಾಬಿನೆಟ್ ಸಭೆ ನಿರ್ಧಾರ

    ಸ್ವತಃ ಸಿಎಂ ಅವರ ಬಳಿಯೂ ಕೂಗಾಡಿದ್ದಾರೆ ಎನ್ನಲಾಗಿದೆ. ಏಕಾಏಕಿ ಮಹದೇವಪ್ಪ ಆಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿ ಆಗಿದ್ದರು. ಆದಾದ ಬಳಿಕ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ನಾವು ಮೂವರು ಕುಳಿತು ಮಾತಾಡೋಣ. ವಿದ್ಯುತ್ ಶುಲ್ಕ ಹೆಚ್ಚಳದ ಬಗ್ಗೆ ತೀರ್ಮಾನ ಮಾಡೋಣ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಉಡುಪಿ ಸೇರಿ ಹಲವೆಡೆ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಮಂಜೂರು: ಕ್ಯಾಬಿನೆಟ್ ಅಸ್ತು

  • ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್ ನೇಮಕ; ನ.24 ರಂದು ಅಧಿಕಾರ ಸ್ವೀಕಾರ

    ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್ ನೇಮಕ; ನ.24 ರಂದು ಅಧಿಕಾರ ಸ್ವೀಕಾರ

    ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ (Justice Surya Kant) ನೇಮಕಗೊಂಡಿದ್ದು, ನವೆಂಬರ್ 24ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಸಿಜೆಐ ಭೂಷಣ್ ಆರ್. ಗವಾಯಿ ಅವರ ಅಧಿಕಾರಾವಧಿ ನವೆಂಬರ್ 23ರಂದು ಅಂತ್ಯಗೊಳ್ಳಲಿದೆ. ಹೀಗಾಗಿ, ಸಿಜೆ ಹುದ್ದೆಗೆ ಸೂರ್ಯಕಾಂತ್ ಹೆಸರನ್ನು ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ (Central Government) ಶಿಫಾರಸು ಮಾಡಿದ್ರು. ಇದೀಗ ಕೇಂದ್ರ ಕಾನೂನು ಸಚಿವಾಲಯ ಬಿ.ಆರ್ ಗವಾಯಿ ಶಿಫಾರಸನ್ನು ಪರಿಗಣಿಸಿದೆ. ನವೆಂಬರ್ 24ರಂದು ನ್ಯಾ. ಸೂರ್ಯಕಾಂತ್ ಸಿಜೆ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಗವಾಯಿ ಅವರಿಗೂ ಮುನ್ನ ಸಂಜೀವ್‌ ಖನ್ನಾ, ಡಿ.ವೈ ಚಂದ್ರಚೂಡ್‌, ಉದಯ್‌ ಉಮೇಶ್‌ ಲಲಿತ್‌, ಎನ್‌.ವಿ ರಮಣ ಸಿಜೆಗಳಾಗಿ ಕರ್ವವ್ಯ ನಿರ್ವಹಿಸಿದ್ದರು.

  • ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಜನಿಕಾಂತ್ (Rajanikanth) ಅಂದರೆ ಕ್ರೇಜ್ ಕಾ ಬಾಪ್. ಅವರ ಚಿತ್ರಗಳು ಮಾಸ್. ಟ್ರೆಂಡ್‌ಗೆ ತಕ್ಕಂತೆ ಸಿನಿಮಾ (Cinema) ಮಾಡಿ ಸೈ ಅನ್ನಿಸಿಕೊಂಡು ಅದನ್ನ ಗೆಲ್ಲಿಸುವ ತಾಕತ್ತು ಹೊಂದಿರೋ ವಿಶ್ವ ಮೆಚ್ಚಿದ ಸೂಪರ್ ಸ್ಟಾರ್. ಇದೀಗ ರಜನಿಕಾಂತ್ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

    ಸದ್ಯಕ್ಕೆ ಇವರ ಕೈಯಲ್ಲಿ ನೂರಾರು ಕೋಟಿಯ ನಾಲ್ಕು ಪ್ರಾಜೆಕ್ಟ್‌ಗಳಿವೆ. `ಜೈಲರ್ 2′ ಸಿನಿಮಾವನ್ನೂ ಪೂರ್ಣಗೊಳಿಸಿದ್ದಾರೆ. ಕಮಲ್ ಹಾಸನ್ ಜೊತೆಗಿನ ಕಾಂಬೋ ಚಿತ್ರ ಘೋಷಣೆಯಾಗಿದೆ. ಡೈರೆಕ್ಟರ್ ನೆಲ್ಸನ್ ಜೊತೆ ಇನ್ನೊಂದು ಚಿತ್ರವೂ ಫಿಕ್ಸ್ ಆಗಿದೆ. ಇಷ್ಟೇ ಅಲ್ಲ ನಿರ್ಮಾಪಕ ಸಿ ಸುಂದರ್ ಜೊತೆಯೂ ರಜನಿಕಾಂತ್ ಡೇಟ್ ಇದೆ. ಹೀಗೆ ಸದ್ಯಕ್ಕೆ ರಜನಿಕಾಂತ್ ಇನ್ನೂ 2027ರವರೆಗೆ ಶೂಟಿಂಗ್ ಮಾಡಿದರೂ ಮುಗಿಯದಷ್ಟು ಪ್ರಾಜೆಕ್ಟ್‌ಗಳನ್ನ ಇಟ್ಟುಕೊಂಡಿದ್ದಾರೆ. ಆದರೆ ಈ ಹೊತ್ತಲ್ಲೇ ರಜನಿಕಾಂತ್ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿರುವುದರ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಸೂಪರ್‌ಸ್ಟಾರ್ ಕುರಿತು ನಿವೃತ್ತಿ ಮಾತು ಕೇಳಿಬರ್ತಿರೋದು ಇದೇ ಮೊದಲಲ್ಲ. ರಜನಿಕಾಂತ್ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ವಿಚಾರ ಬಂದಾಗ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ನಿರ್ಧಾರ ಮಾಡಿದ್ದರು. ಆದರೆ ಅನಾರೋಗ್ಯ ಕಾರಣಕ್ಕೆ ರಾಜಕೀಯ ಪ್ರವೇಶಿಸದಿರಲು ನಿರ್ಧರಿಸಿ ಮತ್ತೆ ನಟನೆಯನ್ನು ಕಂಟಿನ್ಯೂ ಮಾಡಿದ್ರು. ಹಾಗಂತ ಈ ಬಾರಿ ವಿದಾಯಕ್ಕೆ ತೀರ್ಮಾನಿಸೋಕೆ ಕಾರಣ ರಾಜಕೀಯ ಪ್ರವೇಶವಂತೂ ಅಲ್ಲ. ಅದಕ್ಕೊಂದು ವಿಶೇಷ ಕಾರಣವಿದೆ.

    ರಜನಿಕಾಂತ್ ತಮ್ಮ ಮನೆಗೆ ಕಥೆ ಪಟ್ಟಿ ಹಿಡ್ಕೊಂಡು ಬರುವ ನಿರ್ದೇಶಕ ಹಾಗೂ ಚೆಕ್‌ಬುಕ್ ಹಿಡ್ಕೊಂಡು ಬರುವ ನಿರ್ಮಾಪಕರನ್ನ ವಾಪಸ್ ಕಳುಹಿಸುತ್ತಿದ್ದಾರಂತೆ. ಇದೇ ವಿಚಾರಕ್ಕೆ ರಜನಿಕಾಂತ್ ವಿದಾಯ ಹೇಳುವ ಸುದ್ದಿ ಗುಲ್ಲಾಗಿದೆ. ಆದರೆ ರಜನಿಕಾಂತ್ ಸಿನಿಮಾ ನಿರಾಕರಿಸುತ್ತಿರುದಕ್ಕೆ ಕಾರಣ ಮಾತ್ರ ಬೇರೆಯೇ ಇದೆ. ರಜನಿಕಾಂತ್ ವಯಸ್ಸು ಏರುತ್ತಿದೆ. 70 ವರ್ಷ ವಯಸ್ಸು ದಾಟಿದ ಬಳಿಕ ಸಹಜವಾಗೇ ದೇಹ ಕ್ವೀಣಿಸುತ್ತದೆ, ಸುಸ್ತೂ ಜಾಸ್ತಿ ಆಗುತ್ತದೆ. ಹಾಗಂತ ಇದುವೇ ವಿದಾಯಕ್ಕೆ ರೀಸನ್ ಅಲ್ವೇ ಅಲ್ಲ.

    ರಜನಿಕಾಂತ್ ಮನಸ್ಸು ಆಧ್ಯಾತ್ಮದತ್ತ ಹೆಚ್ಚಾಗಿ ವಾಲುತ್ತಿದೆ. ಸರಳವಾಗಿ ಬದುಕೋದನ್ನ ಜೀವನದಲ್ಲಿ ರೂಢಿಸಿಕೊಂಡು ಬಂದವರು ರಜನಿ. ಹೀಗಾಗಿ ವರ್ಷಕ್ಕೊಮ್ಮೆಯಾದ್ರೂ ಆಧ್ಯಾತ್ಮಿಕ ಪ್ರವಾಸ ಮಾಡ್ತಾರೆ. ಮನಸ್ಸಾದಾಗೆಲ್ಲ ಕಾರು ಹತ್ತಿ, ಹುಟ್ಟೂರು ಬೆಂಗಳೂರಿಗೆ ಬಂದು ಯಾರಿಗೂ ಗೊತ್ತಾಗದಂತೆ ಇದ್ದುಬಿಡ್ತಾರೆ. ಇಂಥಹ ರಜನಿಕಾಂತ್ ಎಲ್ಲಾ ಮೋಹಗಳನ್ನೂ ತ್ಯಜಿಸಿ ಜೀವಿಸುತ್ತಿರುವ ವ್ಯಕ್ತಿ. ವಯಸ್ಸು ಮಾಗಿದಂತೆ ಮನಸ್ಸೂ ಮಾಗುತ್ತಿದೆ. ಹೀಗಾಗಿ ಕೈಯಲ್ಲಿದ್ದ ಪ್ರಾಜೆಕ್ಟ್‌ಗಳನ್ನ ಮುಗಿಸಿಕೊಟ್ಟು, ಬಳಿಕ ನೋಡಿದ್ರಾಯ್ತು ಎಂದು ಯಾವುದೇ ಪ್ರಾಜೆಕ್ಟ್‌ಗಳನ್ನ ರಜನಿ ಒಪ್ಪಿಕೊಳ್ತಿಲ್ಲ. ಹೀಗಾಗಿ ರಜನಿಕಾಂತ್ ಚಿತ್ರರಂಗಕ್ಕೆ ವಿದಾಯದ ಸುದ್ದಿ ಚರ್ಚೆಯಾಗುತ್ತಿದೆ.

  • ಬುರುಡೆ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್ – ನ.12ರವರೆಗೆ ಎಸ್‌ಐಟಿ ತನಿಖೆಗೆ ಹೈಕೋರ್ಟ್ ತಡೆ

    ಬುರುಡೆ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್ – ನ.12ರವರೆಗೆ ಎಸ್‌ಐಟಿ ತನಿಖೆಗೆ ಹೈಕೋರ್ಟ್ ತಡೆ

    ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಬುರುಡೆ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನವೆಂಬರ್ 12ರವರೆಗೆ ತನಿಖೆಗೆ ತಡೆ ನೀಡಿ ಹೈಕೋರ್ಟ್ (High Court) ಆದೇಶ ನೀಡಿದೆ.

    ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ ರದ್ದುಕೋರಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್.ಟಿ ಹಾಗೂ ವಿಠಲ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನ ನ್ಯಾ.ಮಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಕೀಲರು, 9 ಬಾರಿ ನೋಟೀಸ್ ನೀಡಿದ್ದು, 9 ಬಾರಿಯೂ ವಿಚಾರಣೆಗೆ ಹಾಜರಾಗಿದ್ದಾರೆ. ಬೆಳಗ್ಗೆ ಇಂದ ಸಂಜೆಯ ತನಕ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಒಳಪಟ್ಟಿದ್ದಾರೆ. 150 ಗಂಟೆಗೂ ಹೆಚ್ಚು ಕಾಲ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಬೇರೆ ಬೇರೆ ಸೆಕ್ಷನ್ ಅಲ್ಲಿ ವಿಚಾರಣೆಗೆ ಕರೆಯುತ್ತಾ ಇದ್ದಾರೆ. ಈ ಪ್ರಕರಣದಲ್ಲಿ ಅರ್ಜಿದಾರರು ಹೇಳುವುದು ಇನ್ನೇನು ಇಲ್ಲ ಎಂದು ವಾದ ಮಾಡಿದರು. ಅರ್ಜಿದಾರರು ಆರೋಪಿಗಳಾಗಿದ್ದಾರಾ ಎಂದು ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲರು ಆರೋಪಿಗಳು ಆಗಿಲ್ಲ, ಸಾಕ್ಷಿಗಳು ಆಗಿಲ್ಲ ಎಂದರು. ಇದನ್ನೂ ಓದಿ: ಕರೂರು ಕಾಲ್ತುಳಿತ ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ ಸುಪ್ರೀಂ ಕೋರ್ಟ್ ಸಮಿತಿ

    ರಾಜಕೀಯ ದ್ವೇಷ, ಧರ್ಮ ದ್ವೇಷ ಎಲ್ಲ ಇದರಲ್ಲಿ ಇದೆ. ನೋಟಿಸ್ ಕೊಟ್ಟು ಬೆಳಗ್ಗೆ ಇಂದ ಸಂಜೆ ತನಕ ಕೂರಿಸುತ್ತಿದ್ದಾರೆ. ಇದಕ್ಕೆ ವಿಚಾರಣೆಗೆ ಯಾಕೆ ಹೋಗಬೇಕು? ಪ್ರಕರಣ ದಾಖಲಿಸುವಾಗ ಪೊಲೀಸರು ಪ್ರಕ್ರಿಯೆ ಪಾಲಿಸಿಲ್ಲ ಅಂತಾ ಇದೇ ವೇಳೆ ಅರ್ಜಿದಾರ ಪರ ವಕೀಲರು ವಾದಿಸಿದರು. ಈಗಾಗಲೇ ಸಾಕಷ್ಟು ನೋಟಿಸ್ ನೀಡಿದ್ದೀರಿ ಅಲ್ವಾ ಎಂದು ಸರ್ಕಾರಿ ಪರ ವಕೀಲ ಜಗದೀಶ್‌ಗೆ ಜಡ್ಜ್ ಪ್ರಶ್ನೆ ಮಾಡಿದರು. ಇದನ್ನೂ ಓದಿ: 1,545 ಕೋಟಿ ನೆರೆ ಪರಿಹಾರ ಕೇಳಲು ಕೇಂದ್ರಕ್ಕೆ ಮನವಿ: ಕ್ಯಾಬಿನೆಟ್ ಸಭೆ ನಿರ್ಧಾರ

    ಪ್ರತಿವಾದ ಆರಂಭಿಸಿದ ಎಸ್ಪಿಪಿ ಜಗದೀಶ್, 164 ಹೇಳಿಕೆಯನ್ನು ಚಿನ್ನಯ್ಯ ಮ್ಯಾಜಿಸ್ಟ್ರೇಟ್ ಮುಂದೆಯೇ ನೀಡಿದ್ದಾನೆ. ಇದೇ ಚಾಂಪಿಯನ್‌ಗಳು ದೂರು ದಾಖಲಿಸಲು ಎಸ್ಪಿ, ಸರ್ಕಾರವನ್ನ ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿದ್ದರು. ಇದೇ ವ್ಯಕ್ತಿಗಳು ದೂರುದಾರಿಗೆ ಆಶ್ರಯ ನೀಡಿದ್ದರು. ಇದೇ ವ್ಯಕ್ತಿಗಳಿಂದ ತಪ್ಪು ಮಾಹಿತಿ ನೀಡಿದ್ದಾಗಿ ಚಿನ್ನಯ್ಯ ಹೇಳಿದ್ದಾನೆ. ಅರ್ಜಿದಾರರು ತನಿಖೆ ನಡೆಸುವಾಗ ಕೂಡ ತೊಂದರೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಮುಂದಿನ ವಿಚಾರಣೆವರೆಗೂ ತನಿಖೆಗೆ ತಡೆ ನೀಡಿ ನವೆಂಬರ್ 12ಕ್ಕೆ ವಿಚಾರಣೆ ಮುಂದೂಡಿದರು. ಇದನ್ನೂ ಓದಿ: 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ಗೌರವ

  • ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prasanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ʻಜೈ ಹನುಮಾನ್ʼ (Jai Hanuman) ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್ಹೀರೋ ಯೂನಿವರ್ಸ್‌ನ 3ನೇ ಸಿನಿಮಾ ಘೋಷಣೆ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ವರ್ಮಾ. ಇದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಕಥೆಯನ್ನು ಹೊಂದಿರಲಿದೆ. ಈ ಚಿತ್ರಕ್ಕೆ ʻಮಹಾಕಾಳಿʼ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

    ಕುಂದಾಪುರದ ಬೆಡಗಿಗೆ ಭೂಮಿ ಶೆಟ್ಟಿ (Bhoomi Shetty) ಮಹಾಕಾಳಿ ಅವತಾರವೆತ್ತಿದ್ದಾರೆ. ಫಸ್ಟ್ ಲುಕ್‌ನಲ್ಲಿ ಭೂಮಿ ಶೆಟ್ಟಿ ಮುಖವನ್ನು ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಅಲಂಕಾರಗೊಳಿಸಲಾಗಿದೆ. ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟು ದೈವಿಕ ಅನುಭವ ನೀಡುವ ಗೆಟಪ್ ನಲ್ಲಿ ಭೂಮಿ ಕಾಣಿಸಿಕೊಂಡಿದ್ದಾರೆ.

    ಪ್ರಶಾಂತ್ ವರ್ಮಾ ತಮ್ಮದೇ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿ ಮಹಾಕಾಳಿ ಚಿತ್ರ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಕೊಲ್ಲೂರು, ಮಹಾಕಾಳಿ ಸಾರಥ್ಯ ವಹಿಸಿಕೊಂಡಿದ್ದಾರೆ.

    ಹಾಗಾದರೆ ಮಹಾಕಾಳಿ ಸಿನಿಮಾದಲ್ಲಿ ಏನಿರಲಿದೆ? ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಮಹಾಕಾಳಿ ಸಿನಿಮಾವನ್ನು ಆರ್ಕೆಎಂಡಿ ಸ್ಟುಡಿಯೋಸ್ ಬ್ಯಾನರ್ ಅಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಹಾಕಾಳಿ ಸಿನಿಮಾವನ್ನು ಭಾರತೀಯ ಭಾಷೆ ಮಾತ್ರವಲ್ಲದೆ ಇತರ ವಿದೇಶಿ ಭಾಷೆಗಳಲ್ಲಿಯೂ ಚಿತ್ರ ಮೂಡಿ ಬರಲಿದೆ. ಹನುಮಾನ್ ಸಿನಿಮಾ ಜಪಾನ್ ಹಾಗೂ ಇತರ ಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡಿತ್ತು.

  • ಆಟೋ ಚಾಲಕರ ಸಂಘಕ್ಕೆ ರಾಯಭಾರಿಯಾದ ರಚ್ಚು

    ಆಟೋ ಚಾಲಕರ ಸಂಘಕ್ಕೆ ರಾಯಭಾರಿಯಾದ ರಚ್ಚು

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.

    ಬೆಂಗಳೂರಿನಿಂದ (Bengaluru) ನೂರಾರು ಆಟೋ ಚಾಲಕರು ಆರ್.ಆರ್ ನಗರದ ಅವರ ನಿವಾಸದ ಬಳಿ ಜಮಾಯಿಸಿ ರಚಿತಾರನ್ನ ಅಫಿಷಿಯಲ್ ಆಗಿ ಚಾಲಕರ ಸಂಘದ (Auto Drivers Association) ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಆಟೋ ಎದುರು ಆಟೋ ಚಾಲಕರ ವಸ್ತ್ರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್. ಈ ವಿಚಾರವನ್ನ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

    ʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ರಚಿತಾ. ಅನೇಕ ಮಹಿಳಾ ಆಟೋ ಚಾಲಕಿಯರೂ ಸೇರಿದಂತೆ ಆಟೋ ಚಾಲಕರು ರಚಿತಾ ಮನೆ ಮುಂದೆ ಭರ್ಜರಿಯಾಗಿ ಜಮಾಯಿಸಿದ್ದರು. ಆಟೋ ಚಾಲಕಿಯರ ಜೊತೆ ತಾವೂ ಖಾಕಿ ಶರ್ಟ್ ಧರಿಸಿಯೇ ನಿಂತಿದ್ದರು ರಚಿತಾ. ಇದೀಗ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿ.