ಆಸೀಸ್ ಕ್ರಿಕೆಟಿಗರಿಗೆ ಪಾಕಿಸ್ತಾನದ ಪ್ರಧಾನಿ ಹೆಸರೇ ಗೊತ್ತಿಲ್ಲ: ವಿಡಿಯೋ

ಬ್ರಿಸ್ಬೇನ್‍: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಪಾಕಿಸ್ತಾನದ ಪ್ರಧಾನಿ ಹೆಸರನ್ನು ಹೇಳಲು ಪೇಚಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಟಿ-20 ಸರಣಿಯನ್ನು 2-0ರಿಂದ ಸೋಲು ಕಂಡಿದೆ. ಈ ಬೆನ್ನಲ್ಲೇ 2 ಪಂದ್ಯಗಳ ಟೆಸ್ಟ್ ಸರಣಿಗೆ ಉಭಯ ತಂಡಗಳು ಸಿದ್ಧತೆ ನಡೆಸಿವೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಟಿವಿ ಚಾನೆಲ್, ಆಸೀಸ್ ತಂಡದ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲು ಪ್ರಯತ್ನಿಸಿತ್ತು. ಈ ವೇಳೆ ಆಟಗಾರರಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯ ಹೆಸರನ್ನು ಕೇಳಲಾಗಿತ್ತು. ಈ ಪೈಕಿ ಶೇ. 90ರಷ್ಟು ಆಟಗಾರರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಂದು ಹೇಳಲು ಸಾಧ್ಯವಾಗಲಿಲ್ಲ.

ಆಶ್ಚರ್ಯವೆಂದರೆ ಪಾಕಿಸ್ತಾನವು ಇಮ್ರಾನ್ ಖಾನ್ ನಾಯಕತ್ವದಲ್ಲಿ 1992ರ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದಿತು. ಈ ಕುತೂಹಲಕಾರಿ ವಿಡಿಯೋ ಈಗ ಈ ವಿಟಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಧಿಕೃತ ಟಿವಿ ಚಾನೆಲ್ ಆಸ್ಟ್ರೇಲಿಯಾ ಬ್ರಾಡ್‍ಕಾಸ್ಟಿಂಗ್ ಕಂಪನಿ ಈ ತಮಾಷೆಯ ವಿಡಿಯೋವನ್ನು ಮಾಡಿದೆ. ಇದರಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಘೋಷಿಸಲಾದ 15 ಮಂದಿಯ ತಂಡದಲ್ಲಿರುವ ಆಟಗಾರರು ಸೇರಿದ್ದಾರೆ. ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಯಾರು ಎಂದು ಎಲ್ಲರಿಗೂ ಒಂದೇ ಪ್ರಶ್ನೆ ಕೇಳಲಾಗಿತ್ತು. ಉಸ್ಮಾನ್ ಖವಾಜಾ ಮತ್ತು ವೇಗದ ಬೌಲರ್ ಜೋಸ್ ಹ್ಯಾಜೆಲ್‍ವುಡ್ ಹೊರತುಪಡಿಸಿ ಬೇರೆ ಯಾವ ಆಟಗಾರರೂ ಸರಿಯಾದ ಉತ್ತರ ನೀಡಲಿಲ್ಲ.

ಆಸ್ಟ್ರೇಲಿಯಾದ ವಿರುದ್ಧ ಪಾಕಿಸ್ತಾನವು ಒಟ್ಟು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲನೆಯ ಪಂದ್ಯವು ಬ್ರಿಸ್ಬೇನ್‍ನಲ್ಲಿ ನವೆಂಬರ್ 21ರಿಂದ 25ರವರೆಗೆ ನಡೆಯಲಿದೆ.

Comments

Leave a Reply

Your email address will not be published. Required fields are marked *