ಬೆಂಗಳೂರು: ಎಟಿಎಂಗಳಲ್ಲಿ ಸ್ಕಿಮ್ಮರ್ ಅಳವಡಿಸಿ ಡೆಬಿಟ್ ಕಾರ್ಡ್ ಮಾಹಿತಿ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಗೌರಂಗ್, ತಮಿಳುನಾಡಿನ ಕಿರುಬಗರನ್ ಬಂಧಿತ ಆರೋಪಿಗಳು. ಬೆಳ್ಳಂದೂರು ಸುತ್ತಮುತ್ತಲ ಪ್ರದೇಶದಲ್ಲಿ ಎಟಿಎಂಗಳಲ್ಲಿ ಮೊದಲು ಸ್ಕಿಮ್ಮರ್ ಅಳವಡಿಸಿ, ಗ್ರಾಹಕರು ಎಟಿಎಂಗೆ ಬಂದ ವೇಳೆ ಸ್ಕಿಮ್ಮರ್ ಮೂಲಕ ಗುಪ್ತ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದರು.
ಸ್ಕಿಮ್ಮರ್ ಮೂಲಕ ಗುಪ್ತ ಮಾಹಿತಿಯನ್ನು ಕದ್ದ ನಂತರ ಪಿಒಎಸ್(ಪಾಯಿಂಟ್ ಆಫ್ ಸೇಲ್) ಉಪಕರಣದ ಸಹಾಯದಿಂದ ಗ್ರಾಹಕರ ಖಾತೆಯಿಂದ ಬೇರೊಂದು ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರು.

ಪೊಲೀಸರ ಗಸ್ತು ತಿರುಗುವ ವೇಳೆ ವ್ಯಕ್ತಿಗಳು ಎಟಿಎಂ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡ ಪೊಲೀಸರು ಅವರನ್ನು ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಲು ಯತ್ನಿಸಿದ್ದಾರೆ.
ಬಳಿಕ ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೃತ್ಯದ ಕುರಿತು ಬಾಯ್ಬಿಟ್ಟಿದ್ದಾರೆ. ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಸ್ಕಿಮ್ಮರ್ ಉಪಕರಣ, ಕೆಲವು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

Leave a Reply