1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

ಕೋಲ್ಕತ್ತಾ: ದನದ ಸೆಗಣಿಯಿಂದ ಗ್ಯಾಸ್, ವಿದ್ಯುತ್ ಉತ್ಪಾದನೆ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕೆ ಈಗ ಹೊಸ ಸೇರ್ಪಡೆ ಎಂಬಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೆಗಣಿಯಿಂದ ತಯಾರಾದ ಬಯೋ ಗ್ಯಾಸ್‍ನಿಂದ ಚಲಿಸುವ ಬಸ್ ಸಂಚಾರ ವ್ಯವಸ್ಥೆ ಪಶ್ಚಿಮ ಬಂಗಾಳದಲ್ಲಿ ಆರಂಭಗೊಂಡಿದೆ.

ಹೌದು. ಕೋಲ್ಕತ್ತಾದ ಉಲ್ಟದಂಗದಿಂದ ಗರೀಯಾದವರೆಗೆ ಬಯೋಗ್ಯಾಸ್‍ನಿಂದ ಸಂಚರಿಸುವ ಬಸ್ ಸೇವೆ ಶುಕ್ರವಾರದಿಂದ ಆರಂಭವಾಗಿದೆ.

ಟಿಕೆಟ್ ಬೆಲೆ ಎಷ್ಟು?
ಬಸ್ ಆರಂಭಗೊಂಡಿದ್ದು ಏನೋ ಸರಿ ಅದರೆ ಅದರ ಟೆಕೆಟ್ ಬೆಲೆ ಎಷ್ಟು ಎಂದು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ. ಕೇವಲ 1 ರೂಪಾಯಿ ನೀಡಿದ್ರೆ ನೀವು ಈ ಬಸ್‍ನಲ್ಲಿ 17.5 ಕಿ.ಮೀ ಸಂಚರಿಸಬಹುದು. ಸದ್ಯಕ್ಕೆ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಂಚರಿಸುವ ಸಾರಿಗೆ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ತಯಾರಿಸಿದ್ದು ಯಾರು?
ಪೋನೆಕ್ಸ್ ಇಂಡಿಯಾ ರಿಸರ್ಚ್ ಡೆವಲಪ್‍ಮೆಂಟ್ ಗ್ರೂಪ್ ವಾಹನಗಳ ತಯಾರಕಾ ಕಂಪೆನಿಯಾದ ಅಶೋಕ್ ಲೇಲ್ಯಾಂಡ್ ಜೊತೆಗೂಡಿ ಈ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದೆ. 54 ಆಸನಗಳುಳ್ಳ ಈ ಬಸ್ ನಿರ್ಮಾಣಕ್ಕೆ ಅಂದಾಜು 13 ಲಕ್ಷ ರೂ. ಖರ್ಚಾಗಿದೆ. ಈ ವರ್ಷ 15ಕ್ಕೂ ಹೆಚ್ಚು ಬಸ್‍ಗಳನ್ನು ವಿವಿಧ ಮಾರ್ಗದಲ್ಲಿ ಕಡಿಮೆ ದರದಲ್ಲಿ ಓಡಿಸಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

ಮೈಲೇಜ್ ಎಷ್ಟು?
ಬಿರ್‍ಭೂಮ್ ಜಿಲ್ಲೆಯಲ್ಲಿರುವ ನಮ್ಮ ಘಟಕದಲ್ಲಿ ಸೆಗಣಿ ಮೂಲಕ ನಾವು ಗ್ಯಾಸ್ ಉತ್ಪಾದನೆ ಮಾಡುತ್ತೇವೆ. ಉತ್ಪಾದನೆಯಾದ ಗ್ಯಾಸ್ ಟ್ಯಾಂಕರ್ ಮೂಲಕ ಕೋಲ್ಕತ್ತಾಕ್ಕೆ ಬರುತ್ತದೆ. ಒಂದು ಕೆಜಿ ಗ್ಯಾಸ್ ಉತ್ಪಾದನೆಗೆ 20 ರೂ. ಖರ್ಚಾಗುತ್ತದೆ. ಒಂದು ಕೆಜಿ ಗ್ಯಾಸ್‍ನಲ್ಲಿ ಬಸ್ 5 ಕಿ.ಮೀ ಸಂಚರಿಸುತ್ತದೆ ಎಂದು ಪೋನೆಕ್ಸ್ ಇಂಡಿಯಾ ರಿಸರ್ಚ್ ಆಂಡ್ ಡೆವಲೆಪ್‍ಮೆಂಟ್ ಗ್ರೂಪಿನ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ದಾಸ್ ಹೇಳಿದ್ದಾರೆ.

ಜ್ಯೋತಿ ಪ್ರಕಾಶ್ ಸಸ್ಯಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿದ್ದು ಕಳೆದ 8 ವರ್ಷಗಳಿಂದ ಬಯೋಗ್ಯಾಸ್ ವಿಚಾರದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಮುಂದೆ ಜರ್ಮನಿಯ ತಂತ್ರಜ್ಞಾನವನ್ನು ಬಳಸಲು ನಾವು ಚಿಂತನೆ ನಡೆಸಿದ್ದೇವೆ. ಒಂದು ಕೆಜಿ ಗ್ಯಾಸ್ ತಯಾರಿಸಲು 20 ರೂ. ಖರ್ಚಾಗುತ್ತದೋ ಅಷ್ಟೇ ವೆಚ್ಚದಲ್ಲಿ 20 ಕಿ.ಮೀ ಓಡುವಂತಹ ಬಸ್ ನಿರ್ಮಿಸುವುದು ನಮ್ಮ ಮುಂದಿನ ಗುರಿ. ಪ್ರಸ್ತುತ ಬಸ್‍ನಲ್ಲಿ 80 ಕೆಜಿ ಸಾಮರ್ಥ್ಯದ  ಟ್ಯಾಂಕ್ ಇದೆ. ಒಂದು ಬಾರಿ ಫುಲ್ ಟ್ಯಾಂಕ್ ಗ್ಯಾಸ್ ತುಂಬಿದರೆ 1,600 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ನಮ್ಮ ಬಸ್‍ಗಳು ಹೊಂದಿದೆ ಎಂದು ವಿವರಿಸಿದ್ದಾರೆ.

ನಿರ್ವಹಣೆ ಹೇಗೆ?
ಟಿಕೆಟ್ ಬೆಲೆ ಕಡಿಮೆ ಇದ್ದ ಕಾರಣ ಡ್ರೈವರ್ ಮತ್ತು ನಿರ್ವಾಹಕರಿಗೆ ಸಂಬಳ ಹೇಗೆ ಕೊಡುತ್ತೀರಿ ಎನ್ನುವ ಪ್ರಶ್ನೆಗೆ ಬಸ್‍ನಲ್ಲಿರುವ ಜಾಹಿರಾತಿನಿಂದ ಸಿಗುವ ಹಣದಿಂದ ನೀಡುತ್ತೇವೆ ಎಂದು ಉತ್ತರಿಸಿದ್ದಾರೆ.

ಬಯೋ ಗ್ಯಾಸ್ ಪಂಪ್‍ಗಳನ್ನು ಸ್ಥಾಪಿಸಲು ಅನುಮತಿ ಸಿಕ್ಕಿದ್ದು, ನಾವು 100 ಪಂಪ್‍ಗಳನ್ನು ಸ್ಥಾಪಿಸುತ್ತೇವೆ. ಅಷ್ಟೇ ಅಲ್ಲದೇ ಬಯೋ ಗ್ಯಾಸ್‍ನಿಂದಾಗಿ ವಾಹನಗಳ ಬಾಳಿಕೆಯ ಅವಧಿಯೂ ಹೆಚ್ಚಾಗುತ್ತದೆ ಎಂದು ಜ್ಯೋತಿ ಪ್ರಕಾಶ್ ದಾಸ್ ತಿಳಿಸಿದ್ದಾರೆ.

ಕೋಲ್ಕತ್ತಾದಿಂದ 204 ಕಿ.ಮೀ ದೂರದಲ್ಲಿರುವ ಭಿರ್‍ಭೂಮ್ ಜಿಲ್ಲೆಯ ದುಬ್ರಜ್‍ಪುರ್ ಎಂಬಲ್ಲಿ ಪೋನೆಕ್ಸ್ ಗ್ಯಾಸ್ ತಯಾರಕಾ ಘಟಕವನ್ನು ಸ್ಥಾಪಿಸಿದ್ದು, ಈ ಘಟಕ ಈಗ 1 ಸಾವಿರ ಕೆಜಿ ಬಯೋ ಗ್ಯಾಸ್ ಉತ್ಪಾದಿಸುತ್ತಿದೆ.

Comments

Leave a Reply

Your email address will not be published. Required fields are marked *