ಲಾಹೋರ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ- 3 ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್‌ ನ ಶಾಪಿಂಗ್ ಮಾರುಕಟ್ಟೆಯಲ್ಲಿ ಗುರುವಾರ ಬಾಂಬ್ ಸ್ಫೋಟವಾಗಿದ್ದು, ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‍ನಲ್ಲಿ ಸಮಯ ನಿಯಂತ್ರಿತ ಸಾಧನ ಬಳಸಿ ಬಾಂಬ್ ಇಟ್ಟು ಸ್ಫೋಟಗೊಳಿಸಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ಹೇಳಿದ್ದಾರೆ.

ಭಾರತೀಯ ಸರಕುಗಳನ್ನು ಮಾರಾಟ ಮಾಡುವ ಲಾಹೋರ್‌ನ ಪ್ರಸಿದ್ಧ ಅನಾರ್ಕಲಿ ಮಾರುಕಟ್ಟೆಯ ಸಮೀಪದ ಪಾನ್ ಮಂಡಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಹತ್ತಿರದ ಅಂಗಡಿಗಳು ಹಾಗೂ ಕಟ್ಟಡಗಳ ಕಿಟಕಿಗಳು ಹಾನಿಗೀಡಾಗಿವೆ. ಇದುವರೆಗೆ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಪಾಕಿಸ್ತಾನದಲ್ಲಿ ತಾಲಿಬಾನ್‍ಗಳು ಕಳೆದ ಡಿಸೆಂಬರ್‍ನಿಂದ ಸರ್ಕಾರ ಮತ್ತು ಪೊಲೀಸರ ವಿರುದ್ಧ ಸರಣಿ ಸ್ಫೋಟಗಳು ಹಾಗೂ ದಾಳಿಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

ಅಫಘಾನಿಸ್ತಾನದ ತಾಲಿಬಾನ್ ಸಂಘಟನೆಯಂತೆ ಕಾರ್ಯನಿರ್ವಹಿಸುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಈ ರೀತಿ ಸಂಭವಿಸಿದ ಹೆಚ್ಚಿನ ಸ್ಫೋಟಗಳ ಹೊಣೆ ಹೊತ್ತುಕೊಂಡಿದೆ.

ನಾವು ಈ ಸ್ಫೋಟದ ಕುರಿತು ತನಿಖೆ ಆರಂಭಿಸಿದ್ದೇವೆ. ಸ್ಫೋಟದಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಐಜಿಪಿ ಡಾ. ಮೊಹಮ್ಮದ್ ಅಬಿದ್ ತಿಳಿಸಿದ್ದಾರೆ.

ಭಯೋತ್ಪಾದನಾ ನಿಗ್ರಹ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಫೋಟದ ಸ್ವರೂಪವನ್ನು ಪರಿಶೀಲಿಸುತ್ತಿದ್ದಾರೆ.

ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೇಯೊ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಇಫ್ತಿಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿ ಕಾಂಗ್ರೆಸ್‍ನ ‘ನಾನು ಹುಡುಗಿ ಹೋರಾಡಬಲ್ಲೆ’ ಪೋಸ್ಟರ್ ಗರ್ಲ್ ಬಿಜೆಪಿಗೆ ಸೇರ್ಪಡೆ

ಸ್ಫೋಟದಲ್ಲಿ ಹಲವಾರು ದ್ವಿಚಕ್ರವಾಹನಗಳು ಮತ್ತು ಮಾರಾಟ ಮಳಿಗೆಗಳು ಹಾನಿಗೊಳಗಾಗಿವೆ. ಸ್ಫೋಟದ ನಂತರ ಇಡೀ ಅನಾರ್ಕಲಿ ಬಜಾರ್ ಮುಚ್ಚಲಾಗಿದೆ.

Comments

Leave a Reply

Your email address will not be published. Required fields are marked *