ಮುಂಬೈನಲ್ಲಿ ರೆಡ್ ಅಲರ್ಟ್, ಇಂದು ಭಾರೀ ಮಳೆ ಸಾಧ್ಯತೆ – ಗೋಡೆ ಕುಸಿದು 18 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ. ಮಲಾಡ್‍ನ ಕರೂರ್ ಗ್ರಾಮದಲ್ಲಿ ಇಂದು ಬೆಳಗ್ಗೆ ಗೋಡೆ ಕುಸಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೆಳ್ಳಂಬೆಳಗ್ಗೆ ಈ ದುರಂತ ನಡೆದಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ಗುಡಿಸಲುಗಳ ಮೇಲೆಯೇ 20 ಅಡಿ ಉದ್ದ ಹಾಗೂ ಬಹು ಎತ್ತರದ ಗೋಡೆ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿರುವ ಪರಿಣಾಮ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಫ್ ಪಡೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಶತಾಬ್ದಿ ಆಸ್ಪತ್ರೆ, ಜೋಗೇಶ್ವರಿ ಆಸ್ಪತ್ರೆ, ಎಂ.ಡಬ್ಲೂ ದೇಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಶತಾಬ್ದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಮುಂಬೈ ನಗರದಲ್ಲಿ ದಶಕದಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಇಂದು ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರೈಲ್ವೇ ಹಳಿಗಳ ಮೇಲೂ ನೀರು ನಿಂತಿರುವ ಕಾರಣಕ್ಕೆ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಮಳೆರಾಯನ ಅಬ್ಬರಕ್ಕೆ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂದಿದೆ. ಇಡೀ ಮುಂಬೈ ನಗರವೇ ಮಳೆಗೆ ಜಲಾವೃತವಾಗಿದ್ದು, ಹಲವೆಡೆ ಮನೆಗಳ ಒಳಗೆ ಕೂಡ ನೀರು ನುಗ್ಗಿದೆ. ಅಲ್ಲದೆ ಮಿತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ನೀರು ಆಸುಪಾಸಿನ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಅಲ್ಲಿನ ಕಟ್ಟಡಗಳ ಕೆಳ ಮಹಡಿ ಸಂಪೂರ್ಣ ಜಲಾವೃತಗೊಳ್ಳುವ ಮಟ್ಟಿಗೆ ನೀರು ತುಂಬಿದೆ.

Comments

Leave a Reply

Your email address will not be published. Required fields are marked *