“ಪ್ರತಿಕೃತಿಯನ್ನು ದಹಿಸೋದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂಬ ಬರಹದ ಪಕ್ಕ ವ್ಯಕ್ತಿಯ ಶವ ಪತ್ತೆ

ಜೈಪುರ: ಬಾಲಿವುಡ್‍ನ ಪದ್ಮಾವತಿ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ಯಾ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ನಡೆದಿದೆ.

ಜೈಪುರದ ನಹಾರ್ ಘರ್ ಕೋಟೆಯ ಬಳಿ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಬಳಿ ಇರುವ ಕಲ್ಲುಗಳ ಮೇಲೆ ನಾವು ಪ್ರತಿಕೃತಿಯನ್ನು ದಹಿಸುವುದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂದು ಬರೆಯಲಾಗಿದೆ. ಮತ್ತೊಂದು ಕಲ್ಲಿನ ಮೇಲೆ “ಪದ್ಮಾವತಿಗೆ ವಿರೋಧ” ಎಂದು ಬರೆದಿರುವುದು ಪತ್ತೆಯಾಗಿದೆ.

ವರದಿಯ ಪ್ರಕಾರ ಮೃತ ವ್ಯಕ್ತಿಯನ್ನು 40 ವರ್ಷದ ಚೇತನ್ ಕುಮಾರ್ ಸೈನಿ ಎಂದು ಗುರುತಿಸಲಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ರಾಜಸ್ಥಾನ ಪೊಲೀಸರು ಇದನ್ನ ಕೊಲೆ ಎಂದು ಪರಿಗಣಿಸಿದ್ದಾರಾದ್ರೂ, ಪದ್ಮಾವತಿ ಚಿತ್ರಕ್ಕೂ ಇದಕ್ಕೂ ಸಂಬಂಧವಿದ್ಯಾ ಎಂಬ ಬಗ್ಗೆ ಹೇಳಿಲ್ಲ.

ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರೋ ಶ್ರೀ ರಜಪೂತ್ ಕಾರ್ಣಿ ಸೇನಾ, ಈ ಘಟನೆಯಲ್ಲಿ ನಾವು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ತಿಂಗಳ ಆರಂಭದಲ್ಲಿ ಕರ್ಣಿ ಸೇನಾ ಕಾರ್ಯಕರ್ತರು ರಾಜಸ್ಥಾನದ ಕೋಟಾದಲ್ಲಿ ಪದ್ಮಾವತಿ ಚಿತ್ರದ ಟ್ರೇಲರ್ ಪ್ರದರ್ಶಿಸುತ್ತಿದೆ ಎಂಬ ವರದಿಯ ಮೇಲೆ ಚಿತ್ರಮಂದಿರವನ್ನ ಧ್ವಂಸಗೊಳಿಸಿದ್ದರು.

ಇಂದು ಕೂಡ ದೆಹಲಿಯ ಆಜಾದ್‍ಪುರ್ ಮೆಟ್ರೋ ನಿಲ್ದಾಣದ ಬಳಿ ಜನರ ಗುಂಪು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದೆ. ರಾಷ್ಟ್ರೀಯ ಚೇತನ ಮಂಚ್ ಎಂಬ ಸಂಘಟನೆಯವರು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯ ಪ್ರತಿಕೃತಿ ದಹಿಸಿದ್ದಾರೆ.

ಡಿಸೆಂಬರ್ 1ಕ್ಕೆ ಪದ್ಮಾವತಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದ್ರೆ ಸದ್ಯ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ.

ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ರೊಮ್ಯಾಂಟಿಕ್ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *