ಕರ್ನಾಟಕದಲ್ಲಿ ಪ್ರಚಂಡ ಗೆಲುವು ಸಾಧಿಸಲಿದ್ದೇವೆ-ಬಿಜೆಪಿಯ ಕಾಂಗ್ರೆಸ್ ಮುಕ್ತ ಕನಸು ಕನಸಷ್ಟೇ: ಸೋನಿಯಾ ಗಾಂಧಿ

ನವದೆಹಲಿ: ದೇಶದಲ್ಲಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮತ್ತೆ ಕಾಂಗ್ರೆಸ್ ಗೆ ಪ್ರಚಂಡ ಗೆಲುವು ಪಡೆಯುವಂತೆ ಮಾಡುತ್ತಾರೆ. ಕರ್ನಾಟಕದಲ್ಲಿ ನಮ್ಮ ಪಕ್ಷ ಗೆಲುವು ಪಡೆಯಲಿದೆ ಎಂದು ಯುಪಿಎ ಒಕ್ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ 84ನೇ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಅವರು, 40 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯ ವೇಳೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಚಂಡ ಜಯ ಪಡೆದ ಘಟನೆಯನ್ನು ನೆನೆಸಿಕೊಂಡರು. ಮುಂದಿನ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಇದೇ ಮಾದರಿಯಲ್ಲಿ ಜಯ ಪಡೆಯಲಿದೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 2014 ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಟೊಳ್ಳು ಭರವಸೆಗಳ ಬಗ್ಗೆ ಮತದಾರರಿಗೆ ಅರಿವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಿತ್ತು ಎಂದು ಹೇಳಿದರು.

2014 ರ ಬಳಿಕ ಬಿಜೆಪಿ ಮಾಡಿಕೊಂಡ ಮೈತ್ರಿಗಳ ಕಾರಣಗಳಿಂದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿದೆ. ಆದರೆ ನಾಲ್ಕು ವರ್ಷಗಳ ಬಿಜೆಪಿ ಆಳ್ವಿಕೆ ನಂತರ ಕಾಂಗ್ರೆಸ್ ಪಕ್ಷ ಮತ್ತೆ ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ. 2017-18 ಅವಧಿಯಲ್ಲಿ ನಡೆದ ಲೋಕಸಭಾ ಸ್ಥಾನಗಳ ಉಪಚುನಾವಣೆಗಳಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿಯೂ ಜಯ ಪಡೆದಿಲ್ಲ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್ ರಂತಹ ನಾಯಕರು ನಾಯಕತ್ವ ವಹಿಸಿರುವ ಪಕ್ಷವಾಗಿದೆ. ಮುಂದೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠ ಗೊಳಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *