ನೀವು ನನ್ನನ್ನ ಬಿಜೆಪಿಯಿಂದ ಹೊರಗೆ ಹಾಕಿಸ್ತೀರಾ ಬಿಡಿ: ಸಿದ್ದರಾಮಯ್ಯಗೆ ಯತ್ನಾಳ್ ಟಾಂಗ್

ಬೆಂಗಳೂರು: ನೀವು ನನ್ನನ್ನ ಬಿಜೆಪಿಯಿಂದ ಹೊರಗೆ ಹಾಕಿಸುತ್ತಿರಾ ಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳಿಗೆ ವಿಧಾನಸಭೆ ಕಲಾಪಕ್ಕೆ ವಿಧಿಸಲಾಗಿರುವ ನಿರ್ಬಂಧದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಈ ವೇಳೆ ಈ ವಿಷಯದಲ್ಲಿ ನಿಮ್ಮ ಪರ ನಾನು ಇದ್ದೇನೆ ಅಂತ ಶಾಸಕ ಯತ್ನಾಳ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡ್ತಾ ಇದ್ದೀರಿ ಎಂದು ಹೇಳಿದರು.

ರೀ ಯತ್ನಾಳ್ ನಿಮ್ಮ ಬಗ್ಗೆ ನಾನು ಮಾತನಾಡಬೇಕು ಅಲ್ವಾ ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು. ಆಗ ಶಾಸಕರು, ನೀವು ಸಕಾರಾತ್ಮಕವಾಗಿ ಮಾತನಾಡುತ್ತಿದ್ದೀರಿ ಹಾಗೂ ಬೆಂಬಲ ಕೊಡುತ್ತಿದ್ದೀರಿ. ದಯವಿಟ್ಟು ಮಾತು ಮುಂದುವರಿಸಿ ಎಂದರು. ಬಳಿಕ ಸಿದ್ದರಾಮಯ್ಯ ಅವರು, ಯತ್ನಾಳ್ ಹಿರಿಯ ನಾಯಕರು. ಅವರಿಗೂ ಗೌರವ ಕೊಡಬೇಕಾಗುತ್ತದೆ. ಅವರು ಯಾವಾಗ್ಲೂ ರೈಟ್ ಟ್ರ್ಯಾಕ್‍ನಲ್ಲಿ ಇರುತ್ತಾರೆ ಎಂದು ಕಾಲೆಳೆದರು.

ತಕ್ಷಣವೇ ಎದ್ದು ನಿಂತ ಯತ್ನಾಳ್, ಹೌದು ಸರ್. ನಾನು ಬಲಪಂಥೀಯ ಪಕ್ಷದಲ್ಲಿ ಇದ್ದೇನೆ. ಹೀಗಾಗಿ ರೈಟ್ ಟ್ರ್ಯಾಕ್‍ನಲ್ಲಿ ಇರುತ್ತೇನೆ ಎಂದು ಸದನದಲ್ಲಿ ನಗೆ ಹರಿಸಿದರು. ಮಾತು ಮುಂದುವರಿಸಿದ ಸಿದ್ದರಾಮಯ್ಯ, ನಿಮ್ಮಲ್ಲಿ ಎಡ ಪಂಥೀಯ ವಿಚಾರಗಳಿವೆ. ಆದರೆ ಏನ್ ಮಾಡೋದು ಬಲ ಪಂಥೀಯ ಪಕ್ಷದಲ್ಲಿ ಇದ್ದೀರಿ. ರೈಟ್ ಮ್ಯಾನ್ ಇನ್ ದಿ ರಾಂಗ್ ಪಾರ್ಟಿ. ನಿಮ್ಮ ನಿಲುವುಗಳನ್ನು ನಾನು ಪ್ರಶಂಸಿಸುತ್ತೇನೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ನೀವು ನನ್ನನ್ನ ಬಿಜೆಪಿಯಿಂದ ಹೊರಗೆ ಹಾಕಿಸಲು ನೀವು ನಿರ್ಧಾರ ಮಾಡಿದ್ದಿರಿ ಎಂದು ಸದನವನ್ನು ನಗೆಗಡಲಲ್ಲಿ ತೇಲಿಸಿದರು. ಬಳಿಕ ಸಿದ್ದರಾಮಯ್ಯ ಅವರು, ಪಕ್ಷದಿಂದ ಹೊರಗೆ ಹಾಕಿದರೂ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ನೀವೇ ಹೇಳಿಲ್ವಾ. ಬಿ.ಎಸ್. ಯಡಿಯೂರಪ್ಪನವರ ಪರವಾಗಿ ನೀವು ಬ್ಯಾಟಿಂಗ್ ಮಾಡುತ್ತಿದ್ದೀರಾ. ಅದನ್ನು ಮುಂದುವರಿಸಿ ಎಂದು ಲೇವಡಿ ಮಾಡಿದರು. ಮಧ್ಯ ಪ್ರವೇಶಿಸಿದ ಯತ್ನಾಳ್, ಸಿಎಂ ಯಡಿಯೂರಪ್ಪ ಅವರ ಪರವಾಗಿ ಮೂರುವರೆ ವರ್ಷ ಬ್ಯಾಟಿಂಗ್ ಮಾಡುತ್ತೇನೆ ಎಂದರು.

ನೀವು ಬ್ಯಾಟಿಂಗ್ ಮಾಡ್ರಿ. ಅದಕ್ಕೆ ನಮ್ಮ ಬೆಂಬಲವು ಇದೆ ಎಂದು ಸಿದ್ದರಾಮಯ್ಯ ಸದನದಲ್ಲಿ ನಗೆ ಹರಿಸಿದರು. ಬಳಿಕ ಇದಕ್ಕೇನ್ ಅಂತಿರಾ ಯಡಿಯೂರಪ್ಪನವರೆ ಎಂದು ಕುಟುಕಿದರು.

Comments

Leave a Reply

Your email address will not be published. Required fields are marked *