ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾರಾಮಾರಿ- ಪೊಲೀಸರಿಂದ ಲಾಠಿಚಾರ್ಜ್, ಇಂದು ಬಂದ್‍ಗೆ ಕರೆ

ಮಂಗಳೂರು: ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನ ನಡುವಿನ ಸಂಘರ್ಷ ಹಿಂಸೆಗೆ ತಿರುಗಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ, ಗುಂಪು ಕಟ್ಟಿಕೊಂಡು ಬಂದು ಕುಕ್ಕೆಯ ಸ್ಥಳೀಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾಳೆ.

ಕಳೆದ ಎರಡು ತಿಂಗಳಿಂದ ವಿವಾದಕ್ಕೆ ಕಾರಣವಾಗಿದ್ದ ಮಠ ಮತ್ತು ದೇವಸ್ಥಾನದ ಸಂಘರ್ಷ ಮೊನ್ನೆ ನವರಾತ್ರಿಯ ಮಧ್ಯೆ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದು ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಹಾಗೆಯೇ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಹುಡುಗರ ಮಧ್ಯೆ ಭಾರೀ ವಾಕ್ಸಮರ ನಡೆದಿತ್ತು.

ಆ ಕಡೆಯಿಂದ ಕುಂದಾಪುರಕ್ಕೆ ಬಂದರೆ ನೋಡಿಕೊಳ್ತೀನಿ ಅಂದಿದ್ರೆ, ಈ ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬಂದರೆ ನೋಡ್ತೀವಿ ಅಂತಾ ಸವಾಲು ಕೂಡ ಆಗಿತ್ತು. ಇತ್ತ ವಾಟ್ಸಪ್ ಸವಾಲು ಸ್ವೀಕರಿಸಿದ ಚೈತ್ರಾ ಕುಂದಾಪುರದ ತನ್ನ ಹುಡುಗರನ್ನು ಕಟ್ಟಿಕೊಂಡು ಸ್ವಾಮೀಜಿಯನ್ನು ಕಾಣುವ ನೆಪದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಳು.

ಈ ವಿಚಾರ ತಿಳಿದು ಚೈತ್ರಾಳನ್ನು ಪ್ರಶ್ನೆ ಮಾಡಲು ಬಂದಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಅಂಗಳದಲ್ಲಿಯೇ ಬೀದಿ ಕಾಳಗ ನಡೆದಿದೆ. ಚೈತ್ರಾ ಮತ್ತು ಹುಡುಗರು ರಾಡ್ ಹಿಡ್ಕೊಂಡು ಹಿಂದೂ  ಜಾಗರಣ ವೇದಿಕೆಯ ಸುಳ್ಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಎಂಬಾತನ ಮೇಲೆ ಹಲ್ಲೆ ನಡೆಸಿದ್ದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಚಾರ ತಿಳಿದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಲಾಠಿಚಾರ್ಜ್ ನಡೆಸಿ ಎರಡು ಗುಂಪನ್ನು ಚದುರಿಸಿದ್ದಾರೆ. ಸಂಜೆ ಹೊತ್ತಿಗೆ ಚೈತ್ರಾ ನಡೆಸಿದ ದರ್ಪ ಮತ್ತು ರಾಡಿನಲ್ಲಿ ಹಲ್ಲೆ ನಡೆಸಿದ್ದು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ. ತಲೆಗೆ ಗಂಭೀರ ಗಾಯಗೊಂಡ ಗುರುಪ್ರಸಾದ್ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವೇಳೆ ಲಾಠಿಚಾರ್ಜ್ ಮಾಡಿ ಗುಂಪು ಚದುರಿಸಿದ್ದ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದು ಸ್ಥಳೀಯರನ್ನು ಕೆರಳಿಸಿದ್ದು, ಚೈತ್ರಾ ಮತ್ತು ಗ್ಯಾಂಗ್ ಸದಸ್ಯರನ್ನು ಬಂಧಿಸಬೇಕೆಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಗುರುವಾರ ವರ್ತಕರು ಸ್ವಯಂಪ್ರೇರಿತರಾಗಿ ಕುಕ್ಕೆ ಸುಬ್ರಹ್ಮಣ್ಯ ಬಂದ್‍ಗೆ ಮುಂದಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *