ಗೆಳತಿಯನ್ನ ಹತ್ಯೆಗೈದ ಪ್ರಿಯಕರನಿಗೆ ಮರಣ ದಂಡನೆ

– ಸಹಾಯ ಮಾಡಿದ್ದ ಆರೋಪಿಯ ತಾಯಿ, ಅಕ್ಕನಿಗೆ ಜೀವಾವಧಿ ಶಿಕ್ಷೆ

ಗುವಾಹಟಿ: ಗೆಳತಿಯನ್ನು ಹತ್ಯೆಗೈದು ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ್ದ ಆರೋಪಿಗೆ ಅಸ್ಸಾಂನ ಗುವಾಹಟಿ ಕೋರ್ಟ್ ಮರಣ ದಂಡನೆ ವಿಧಿಸಿದೆ.

ಶ್ವೇತಾ ಅಗರ್ವಾಲ್ ಕೊಲೆಯಾಗಿದ್ದ ವಿದ್ಯಾರ್ಥಿನಿ. ಗೋವಿಂದ್ ಸಿಂಘಾಲ್ ಮರಣ ದಂಡನೆಗೆ ಗುರಿಯಾದ ಅಪರಾಧಿ. ಗೋವಿಂದ್ ಸಿಂಘಾಲ್ ಸಹಾಯ ಮಾಡಿದ್ದ ತಾಯಿ ಕಮಲಾ ದೇವಿ ಹಾಗೂ ಅಕ್ಕ ಭುವಾನಿ ಸಿಂಘಾಲ್ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ವಿದ್ಯಾರ್ಥಿನಿ ಶ್ವೇತಾ ಅಗರ್ವಾಲ್ 2015ರ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದ ಟಾಪರ್ ಆಗಿದ್ದರು. ಬಳಿಕ ಗುವಾಹಟಿಯ ಕೆಸಿ ದಾಸ್ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಶ್ವೇತಾಗೆ ಗೋವಿಂದ್ ಪರಿಚಯವಾಗಿದ್ದ.

ಚಾರ್ಜ್ ಶೀಟ್ ಪ್ರಕಾರ, 2017 ಡಿಸೆಂಬರ್ 4ರಂದು ಶ್ವೇತಾ ಗೆಳೆಯ ಗೋವಿಂದ್ ಸಿಂಘಾಲ್‍ನ ಬಾಡಿಗೆ ಮನೆಗೆ ಹೋಗಿದ್ದಳು. ಇಬ್ಬರು ಮನೆಯಲ್ಲಿ ಕುಳಿತು ಮದುವೆ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದರು. ಕೋಪಗೊಂಡ ಗೋವಿಂದ್ ಶ್ವೇತಾಗೆ ಹೊಡೆದು ತಳ್ಳಿದ್ದ. ಪರಿಣಾಮ ಶ್ವೇತಾ ಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ತಲೆಗೆ ಭಾರೀ ಹೊಡೆತ ಬಿದ್ದು ಪ್ರಜ್ಞೆ ತಪ್ಪಿದ್ದರು.

ಪ್ರಕರಣಕ್ಕೆ ಟ್ವಿಸ್ಟ್ ನೀಡಲು ಮುಂದಾಗಿದ್ದ ಗೋವಿಂದ್‍ಗೆ ತಾಯಿ ಹಾಗೂ ಅಕ್ಕ ಸಹಾಯಕ್ಕೆ ಮುಂದಾಗಿದ್ದರು. ಶ್ವೇತಾ ಅವರನ್ನು ಬಾತ್ ರೂಂನಲ್ಲಿ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಆದರೆ ಪೊಲೀಸ್ ವಿಚಾರಣೆ ವೇಲೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಗೋವಿಂದ್, ಆತನ ತಾಯಿ ಹಾಗೂ ಅಕ್ಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಆರೋಪಿಗಳ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಮೂವರನ್ನು ಅಪರಾಧಿಗಳೆಂದು ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.

Comments

Leave a Reply

Your email address will not be published. Required fields are marked *