ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್‌

ವಾಷಿಂಗ್ಟನ್‌: ಇರಾನ್‌ನಲ್ಲಿರುವ (Iran) ಪ್ರಭುತ್ವ ಬದಲಾದರೆ ಪಾಕಿಸ್ತಾನ-ಇರಾನ್ ಗಡಿಯಲ್ಲಿರುವ ಪ್ರತ್ಯೇಕತಾವಾದಿ ಮತ್ತು ಜಿಹಾದಿ ಗುಂಪುಗಳು ಲಾಭ ಪಡೆಯಬಹುದು ಎಂದು ಪಾಕಿಸ್ತಾನ (Pakistan) ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ಸಭೆಯಲ್ಲಿ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ.

ಇಸ್ರೇಲ್‌ ಮತ್ತು ಇರಾನ್‌ (Israel-Iran) ನಡುವಿನ ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಟ್ರಂಪ್‌ ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ (White House) ಮುನೀರ್‌ ಜೊತೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಇರಾನ್‌ ಅಸ್ಥಿರಗೊಂಡರೆ ಉಗ್ರ ಸಂಘಟನೆಗಳು ಲಾಭ ಪಡೆಯುವ ಸಾಧ್ಯತೆಯಿದೆ. ಇದು ಗಡಿ ಭಾಗದಲ್ಲಿ ಭಯವನ್ನುಂಟುಮಾಡಿದೆ ಎಂದು ಮುನೀರ್‌ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಮುನೀರ್‌ಗೆ ಟ್ರಂಪ್‌ ಡಿನ್ನರ್‌ – ಪಾಕ್‌ ನೆಲದಿಂದ ಅಮೆರಿಕ ಇರಾನ್‌ ಮೇಲೆ ದಾಳಿ ಮಾಡುತ್ತಾ?

 

ಪಾಕಿಸ್ತಾನ ಮತ್ತು ಇರಾನ್ 900 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಇಲ್ಲಿ ದೀರ್ಘಕಾಲದಿಂದ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ. ಇರಾನ್ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಸಂಘಟನೆಗಳು ಗಡಿಯ ಎರಡೂ ಬದಿಗಳಲ್ಲಿ ಕಾರ್ಯನಿರ್ವಹಿಸುತ್ತವೆ.

 

ಈಗ ಅಮೆರಿಕದ ಪರ ವಾಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್‌ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಮೇ 27ಕ್ಕೆ ಇರಾನ್‌ಗೆ ಭೇಟಿ ನೀಡಿದ್ದರು. ಇರಾನ್‌ಗೆ ಭೇಟಿ ನೀಡಿದ ಮೂರು ವಾರದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪಾಕಿಸ್ತಾನವು ಇಸ್ರೇಲ್‌ನ ದಾಳಿಯನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಖಂಡಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಶಫ್ಕತ್ ಅಲಿ ಖಾನ್, ಇದು ಇಡೀ ಪ್ರಾದೇಶಿಕ ಭದ್ರತಾ ರಚನೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಇದು ನಮ್ಮ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.