ಟೀ ಮಾರುತ್ತಿದ್ದಾರೆ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ!

ನವದೆಹಲಿ: ಭಾರತದ ಪರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಕಂಚು ಪದಕ ಪಡೆದಿದ್ದ ಹರೀಶ್ ಕುಮಾರ್ ಹೊಟ್ಟೆ ಪಾಡಿಗಾಗಿ ಟೀ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ.

ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಹರೀಶ್, ನಮ್ಮದು ದೊಡ್ಡ ಕುಟುಂಬವಾಗಿದ್ದು, ಮನೆಯ ಆದಾಯ ಪ್ರಮಾಣ ಕಡಿಮೆ ಇದೆ. ಅದ್ದರಿಂದ ತಂದೆಗೆ ಸಹಾಯವಾಗಲು ಪ್ರತಿನಿತ್ಯ ಟೀ ಹೋಟೆಲ್‍ನಲ್ಲಿ ಕೆಲಸ ಮಾಡುತ್ತೇನೆ. ಇದನ್ನು ಹೊರತು ಪಡಿಸಿ ನಿತ್ಯ 2 ರಿಂದ 6 ಗಂಟೆಗಳ ಕಾಲ ತರಬೇತಿ ಪಡೆಯಲು ಶ್ರಮವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗ ಪಡೆದು ಕುಟುಂಬಕ್ಕೆ ಆಸರೆಯಾಗುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

2018 ರ ಏಷ್ಯನ್ ಗೇಮ್ಸ್ ನ ಕಾಲಿನ ಮೂಲಕ ಚೆಂಡನ್ನು ಕಳುಹಿಸುವ ಸೆಪಕ್ ಟಕ್ರಾವ್(ಕಿಕ್ ವಾಲಿಬಾಲ್) ಹರೀಶ್ ತಂಡದ ಸದಸ್ಯರಾಗಿದ್ದರು. 2011 ರಲ್ಲಿ ತಾನು ಕ್ರೀಡಾ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಕೋಚ್ ಹೇಮ್ರಾಜ್ ಅವರು ನನ್ನನ್ನು ಈ ಕ್ರೀಡೆಗೆ ಪರಿಚಯಿಸಿದರು. ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಬಲ ನೀಡಿದೆ. ಈ ಕ್ರೀಡೆಯಲ್ಲಿ ದೇಶಕ್ಕಾಗಿ ಉತ್ತಮ ಹೆಸರು ತರಲು ಶ್ರಮವಹಿಸುತ್ತಿದ್ದೇನೆ ಎಂದರು.

ಹರೀಶ್ ಅವರ ಈ ಸಾಧನೆಗೆ ಕುಟುಂಬಸ್ಥರ ಬೆಂಬಲವೂ ಇದ್ದು ಮಗನ ಸಾಧನೆಯನ್ನು ಗುರುತಿಸಿದ ಕೋಚ್‍ಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ದೇಶಕ್ಕಾಗಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಹೊಂದಿರುವ ತಮ್ಮ ಮಗನಿಗೆ ಸರ್ಕಾರ ಊಟ ಹಾಗೂ ವಸತಿ ನೀಡಿದೆ ಎಂದು ತಿಳಿಸಿದ್ದಾರೆ. ಅಂದಹಾಗೇ ವೃತ್ತಿಯಲ್ಲಿ ಹರೀಶ್ ಅವರ ತಂದೆ ಆಟೋ ಚಾಲಕರಾಗಿದ್ದು, ದೆಹಲಿಯಲ್ಲಿ ಸಣ್ಣ ಟೀ ಅಂಗಡಿ ಹೊಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *