ಹೋರಾಟ ಅಂದ್ರೆ ಇದು – ಕೊನೆಯವರೆಗೂ ಕಾದಾಡಿ ಸೋತ ಅಫ್ಘಾನಿಸ್ತಾನ

– 2 ರನ್‌ ರೋಚಕ ಜಯ, ಸೂಪರ್‌ 4ಗೆ ಶ್ರೀಲಂಕಾ

ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಸೂಪರ್‌ 4 ಪ್ರವೇಶಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ (Afghanistan) ವಿರೋಚಿತ ಸೋಲನ್ನು ಅನುಭವಿಸಿದ್ದು, ಶ್ರೀಲಂಕಾ (Sri Lanka) 2 ರನ್‌ಗಳ ಜಯ ಸಾಧಿಸುವ ಮೂಲಕ ಸೂಪರ್‌ 4 ಪ್ರವೇಶ ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತು. ಈ ಮೊತ್ತ ಸವಾಲಿನ ಮೊತ್ತವಾಗಿದ್ದರೂ ಅಫ್ಘಾನಿಸ್ತಾನಕ್ಕೆ ಮತ್ತೊಂದು ಸವಾಲು ಇತ್ತು.

ಬಾಂಗ್ಲಾದೇಶದ (Bangladesh) ವಿರುದ್ಧ ಪಂದ್ಯ ಸೋತಿದ್ದರಿಂದ ನೆಟ್‌ ರನ್‌ ರೇಟ್‌ ಬಹಳ ಕಡಿಮೆ ಇತ್ತು. ಹೀಗಾಗಿ 37 ಓವರ್‌ನಲ್ಲಿ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ಇತ್ತು. ಈ ಕಾರಣಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ 37.4 ಓವರ್‌ಗಳಲ್ಲಿ 289 ರನ್‌ಗಳಿಸಿ ಆಲೌಟ್‌ ಆಗಿ ಟೂರ್ನಿಯಿಂದ ಹೊರ ಬಿತ್ತು.

ಆರಂಭದಲ್ಲೇ ಅಫ್ಘಾನಿಸ್ತಾನ ವಿಕೆಟ್‌ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 59 ರನ್‌(66 ಎಸೆತ, 3 ಬೌಂಡರಿ, 1 ಸಿಕ್ಸರ್‌) ರಹ್ಮತ್‌ ಶಾ 45 ರನ್‌ (40 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದು ಚೇತರಿಕೆ ನೀಡಿದರು. ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ

ನಂತರ ಬಂದ ಮೊಹಮ್ಮದ್‌ ನಬಿ ಬಿರುಸಿನ ಬ್ಯಾಟ್‌ ಬೀಸಿದರು. ಕೇವಲ 32 ಎಸೆತಗಳಲ್ಲಿ 65 ರನ್‌(6 ಬೌಂಡರಿ, 5 ಸಿಕ್ಸರ್‌ ) ಸಿಡಿಸಿ ಪಂದ್ಯವನ್ನು ರೋಚಕ ಘಟ್ಟದತ್ತ ತಂದು ನಿಲ್ಲಿಸಿದರು. ಕೊನೆಯಲ್ಲಿ ನಜಿಬುಲ್ಲಾ ಮತ್ತು ರಷೀದ್‌ ಖಾನ್‌ ಗೆಲುವಿನ ದಡದತ್ತ ತಂದಿದ್ದರು. ಇವರಿಬ್ಬರು 23 ಎಸೆತಗಳಲ್ಲಿ 39 ರನ್‌ ಜೊತೆಯಾಟವಾಡಿದರು. ಇನ್ನೇನು ಅಫ್ಘಾನ್‌ಗೆ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾಗ ನಜಿಬುಲ್ಲಾ 23 ರನ್‌( 15 ಎಸೆತ, 1 ಬೌಂಡರಿ, 2 ಸಿಕ್ಸರ್)‌ ಹೊಡೆದು ಔಟಾದರು. ಹೀಗಿದ್ದರೂ ರಶೀದ್‌ ಖಾನ್‌ ಇನ್ನೊಂದು ಕಡೆಯಲ್ಲಿ ನಿಂತು ಅಬ್ಬರಿಸುತ್ತಿದ್ದರು. ಆದರೆ 37.1ನೇ ಓವರಿಗೆ ಮುಜೀಬ್‌ ಮತ್ತು 37.4ನೇ ಎಸೆತಕ್ಕೆ ಫಾರೂಕಿ ಔಟಾಗುವುದರೊಂದಿಗೆ ಅಫ್ಘಾನಿಸ್ತಾನ ಏಷ್ಯಾ ಕಪ್‌ನಿಂದ ನಿರ್ಗಮಿಸಿತು.

ರಶೀದ್‌ ಖಾನ್‌ ಔಟಾಗದೇ 27 ರನ್‌(16 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದರು. ರಶೀದ್‌ ಖಾನ್‌ ನಾನ್‌ ಸ್ಟ್ರೈಕ್‌ನಲ್ಲಿ ಇದ್ದ ಕಾರಣ 37ನೇ ಓವರ್‌ನಲ್ಲಿ ಸ್ಟ್ರೈಕ್‌ ಸಿಕ್ಕಿರಲಿಲ್ಲ. 37ನೇ ಓವರ್‌ನಲ್ಲಿ ಪಂದ್ಯ ಮುಗಿಸದೇ ಇದ್ದರೂ 37.4 ಓವರ್‌ನಲ್ಲಿ ಸಿಕ್ಸ್‌ ಚಚ್ಚಿ 295 ರನ್‌ ಗಳಿಸಿದ್ದರೆ ಅಫ್ಘಾನಿಸ್ತಾನ ಸೂಪರ್‌ 4 ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಧನಂಜಯ ಡಿಸಿಲ್ವಾ ಬಿಗಿಯಾದ ಬೌಲಿಂಗ್‌ನಿಂದಾಗಿ ಲಂಕಾ 2 ರನ್‌ಗಳ ಜಯ ಸಾಧಿಸುವುದರೊಂದಿಗೆ ಸೂಪರ್‌ 4 ಪ್ರವೇಶಿಸಿದೆ.

ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಲಂಕಾ ಪರವಾಗಿ ಕುಸಾಲ್ ಮೆಂಡಿಸ್ 92 ರನ್‌( 84 ಎಸೆತ, 6 ಬೌಂಡರಿ, 3 ಸಿಕ್ಸರ್‌), ಪಾತುಮ್‌ ನಿಸ್ಸಾಂಕ 41 ರನ್‌, ಮಹೇಶ್‌ ತೀಕ್ಷಣ 28 ರನ್‌, ದುನಿತ್ ವೆಲ್ಲಲಾಗೆ 36 ರನ್‌ ಹೊಡೆದರು.

ಅಫ್ಘಾನಿಸ್ತಾನ ಸೋತರೂ ಕ್ರಿಕೆಟ್‌ ಇತಿಹಾಸದಲ್ಲಿ ರೋಚಕ ಹೋರಾಟ ನಡೆಸಿದ ಪಂದ್ಯಗಳ ಸಾಲಿಗೆ ಈ ಪಂದ್ಯ ಸೇರ್ಪಡೆಯಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಅಫ್ಘಾನ್‌ ಆಟಗಾರರ ಕೆಚ್ಚೆದೆಯ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]