ಸಿಎಂ ನಿಮಗೆ ನಾವು ಸದಾ ಆಭಾರಿ: ಅಶ್ವಿನಿ ಪುನೀತ್ ರಾಜ್‍ಕುಮಾರ್

ಬೆಂಗಳೂರು: ಅಪ್ಪು ಕನಸಿನ ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ನಿನ್ನೆ ಬಿಡುಗಡೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಟೀಸರ್ ಬಿಡುಗಡೆ ಕುರಿತು ಸಿಎಂ ನಿನ್ನೆ ಟ್ವೀಟ್ ಮಾಡಿದ್ದರು, ಈ ಟ್ವೀಟ್ ಗೆ ಅಶ್ವಿನಿ ಅವರು ರಿಟ್ವೀಟ್ ಮಾಡಿ, ಈ ‘ಗಂಧದ ಗುಡಿ’ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ ಎಂದು ಹೇಳಿದ್ದಾರೆ.

ಪ್ರಾಕೃತಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಜನರಿಗೆ ಈ ಚಿತ್ರ ಪ್ರೇರಣೆಯಾಗಲಿ ಎಂದು ಬರೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಚಿತ್ರಕ್ಕೆ ಶುಭಹಾರೈಸಿದ್ದರು. ಇದನ್ನೂ ಓದಿ: ಟೀಸರ್ ಕೊನೆಯಲ್ಲಿ ಅಪ್ಪು ಸ್ಮೈಲ್ ನೋಡಿ ಕರುಳು ಕಿತ್ತು ಬಂದಂತಾಯ್ತು: ಶಿವಣ್ಣ

ಟ್ವೀಟ್ ನಲ್ಲೇನಿತ್ತು..?
ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುವುದಾಗಿ ತಿಳಿಸಿದ್ದರು.

ಸೋಮವಾರ(ಡಿ.6) ಅಪ್ಪು ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇಂದೇ ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಗಂಧದ ಗುಡಿ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ಪ್ರಯಾಣಿಸುವುದನ್ನು ಕಾಣಬಹುದಾಗಿದೆ. ಆನೆ, ಹುಲಿ, ಹಾವು ಸೇರಿದಂತೆ ಸುಂದರವಾದ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ವಿಶೇಷವೆಂದರೆ ಕೊನೆಯಲ್ಲಿ ಡಾ. ರಾಜ್‍ಕುಮಾರ್ ಧ್ವನಿಯಲ್ಲಿ ಅರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂಬ ಸಂದೇಶ ಸಾರಲಾಗಿದೆ. ಅಮೋಘವರ್ಷ ನಿರ್ದೇಶನದ ಈ ಡಾಕ್ಯುಮೆಂಟರಿ ಸಿನಿಮಾ ಮುಂದಿನ ವರ್ಷ 2022ರಲ್ಲಿ ತೆರೆಕಾಣಲಿದೆ.

Comments

Leave a Reply

Your email address will not be published. Required fields are marked *