ಉರುಳಾಟ, ಹೊರಳಾಟ, ಕಣ್ಣೀರು, ಘೋಷಣೆ-ಅಶೋಕ್ ಪೂಜಾರಿ ಆಪರೇಷನ್ ಫೇಲ್

-ಗೋಕಾಕ್‍ನಲ್ಲಿ ತ್ರಿಕೋನ ಸ್ಪರ್ಧೆ

ಬೆಳಗಾವಿ: ನಾಮಪತತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದರಿಂದ ಗೋಕಾಕ್ ಜೆಡಿಎಸ್ ಅಭ್ಯರ್ಥಿಯಾಗಿರುವ ಅಶೋಕ್ ಪೂಜಾರಿ ಮನವೊಲಿಸುವಲ್ಲಿ ಬಿಜೆಪಿ ವಿಫಲವಾಯ್ತು.

ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿಯವರ ಧ್ಯಾನ ಮಂದಿರ ಇಂದು ರಣರಂಗವಾಗಿತ್ತು. ಬಿಜೆಪಿಯವರು ನಾಮಪತ್ರ ಹಿಂದೆ ಪಡೆಯುವಂತೆ ನಡೆಸಿದ ಕಡೆ ಕಸರತ್ತು ವಿಫಲಗೊಂಡಿತು. ಜೆಡಿಎಸ್ ಕಾರ್ಯಕರ್ತರು ಕೆಲಕಾಲ ಅಪರೇಷನ್ ಮಾಡಲು ಬಂದ ಬಿಜೆಪಿ ಮುಖಂಡರನ್ನು ಘೇರಾವ್ ಹಾಕಿದರು. ಕಾರ್ಯಕರ್ತರನ್ನು ಕಡೆಗಣಿಸಿ ಅಶೋಕ್ ಪೂಜಾರಿ ಬಿಜೆಪಿಗೆ ಹೋದರೆ ನಾವು ವಿಷ ಕುಡಿಯುತ್ತೇವೆ. ನಮ್ಮ ಹೆಣದ ಮೇಲೆ ದಾಟಿ ಹೋಗಿ ರಾಜಕಾರಣ ಮಾಡಿ ಎಂದು ಜೆಡಿಎಸ್ ಅಭ್ಯರ್ಥಿಗೂ ಬೆವರಿಳಿಸಿದರು.

ಕೆಲ ಕಾರ್ಯಕರ್ತರು ಭಾವುಕರಾಗಿ ಅಳಲಾರಂಭಿಸುತ್ತಿದ್ದಂತೆ ಅಶೋಕ್ ಪೂಜಾರಿ ಅವರು ಮತ್ತೊಮ್ಮೆ ಕಣ್ಣೀರು ಹಾಕಿದರು. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬಂದಿದ್ದ ಬಿಜೆಪಿ ಮುಖಂಡರು ಮರಳಿದರು. ಒಂದೆಡೆ ಕಾರ್ಯಕರ್ತರು ಎಂ.ಎಲ್.ಸಿ ಮಹಾಂತೇಶ್ ಕವಟಗಿಮಠ ಗೆ ಘೇರಾವ್ ಹಾಕಿ ಘೋಷಣೆ ಕೂಗುತ್ತಿದ್ದರೆ, ಇನ್ನೊಂದೆಡೆ ಸಿಎಂ, ಮಾಜಿ ಸಿಎಂ ದೂರವಾಣಿಯಲ್ಲಿ ಮಾತನಾಡಲು ಭಾರೀ ಯತ್ನ ನಡೆಸಿದರು. ಇದಾವುದಕ್ಕೂ ಜಗ್ಗದ ಬಗ್ಗದ ಕಾರ್ಯಕರ್ತರು ಅಭ್ಯರ್ಥಿ ಕೈಗೆ ಮೊಬೈಲ್ ತಲುಪಿಸಲೇ ಇಲ್ಲ. ಗೊಂದಲ ಗದ್ದಲದ ನಡುವೆ ಕಾರ್ಯಕರ್ತರು ರಸ್ತೆಯಲ್ಲಿ ಬಿದ್ದು ಉರುಳಾಟ ಮಾಡುತ್ತಿದ್ದಂತೆ ಅಶೋಕ್ ಪೂಜಾರಿ ತಾಳ್ಮೆಯಿಂದ ಇರುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ನಾಮಪತ್ರ ವಾಪಸ್ ಪಡೆದ ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು

ಗೊಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ನಾಮಪತ್ರವನ್ನು ಹಿಂದಕ್ಕೆ ಪಡೆಯುವ ಬಿಜೆಪಿ ಕಸರತ್ತು ವ್ಯರ್ಥವಾಯ್ತು. ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ ಹಾಗೂ ಜೆಡಿಎಸ್ ನಿಂದ ಅಶೋಕ್ ಪೂಜಾರಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಹೈ ವೊಲ್ಟೇಜ್ ಕ್ಷೇತ್ರದಲ್ಲಿ ಜೆಡಿಎಸ್ ಭಾರೀ ಕಸರತ್ತು ನಡೆಸಿ ಅಭ್ಯರ್ಥಿಯನ್ನು ಉಳಿಸಿಕೊಂಡಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ  ಪ್ರಕಾಶ್ ಬಾಗೋಜಿ ಅಸಮಾಧಾನ ಹೊರಹಾಕದೇ ಅಶೋಕ್ ಪೂಜಾರಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು ದಿನದಿಂದ ದಿನಕ್ಕೆ ಗೋಕಾಕ್ ಉಪಕದನ ಕುತೂಹಲಕ್ಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *