ಬೇಕಿದ್ರೆ ʻದಿ ಕಾಶ್ಮೀರ್‌ ಫೈಲ್ಸ್‌ʼನ್ನು ಯೂಟ್ಯೂಬ್‌ಗೆ ಹಾಕಲಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್

ನವದೆಹಲಿ: ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಕುರಿತ ಸಿನಿಮಾ ʼದಿ ಕಾಶ್ಮೀರ್‌ ಫೈಲ್ಸ್‌ʼಗೆ ರಾಷ್ಟ್ರ ರಾಜಧಾನಿಯಲ್ಲೂ ತೆರಿಗೆ ವಿನಾಯಿತಿ ಘೋಷಿಸಬೇಕು ಎಂಬ ಬಿಜೆಪಿ ಶಾಸಕರ ಒತ್ತಾಯಕ್ಕೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್‌, ಬಿಜೆಪಿಯವರು ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಳುತ್ತಿದ್ದಾರೆ. ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್‌ಗೆ ನೀಡಲಿ. ಉಚಿತವಾಗಿ ಸಿನಿಮಾ ನೋಡಬಹುದು ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್

ನಮ್ಮನ್ನು ತೆರಿಗೆ ಮುಕ್ತ ಮಾಡಿ ಎಂದು ಏಕೆ ಕೇಳುತ್ತಿದ್ದೀರಿ? ಅಷ್ಟು ಉತ್ಸುಕರಾಗಿದ್ದರೆ ವಿವೇಕ್ ಅಗ್ನಿಹೋತ್ರಿಯವರಿಗೆ ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ, ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು. ಆಗ ತೆರಿಗೆ ಮುಕ್ತ ಮಾಡುವ ಅಗತ್ಯವಾದರೂ ಏಕೆ ಬರುತ್ತದೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ‌

ಈಗಾಗಲೇ ಕರ್ನಾಟಕ, ಉತ್ತರ ಪ್ರದೇಶ, ತ್ರಿಪುರ, ಹರಿಯಾಣ, ಗುಜರಾತ್‌, ಉತ್ತರಾಖಂಡ್‌ ಸೇರಿದಂತೆ ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

ಅರವಿಂದ್‌ ಕೇಜ್ರಿವಾಲ್‌ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʻನೀಲ್ ಬಟ್ಟೆಯ್ ಸಣ್ಣಾಟʼ ಸಿನಿಮಾಗೆ ದೆಹಲಿ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ ಎಂದು ಕೇಜ್ರಿವಾಲ್‌ ಮಾಡಿದ್ದ ಟ್ವೀಟ್‌ ಹಂಚಿಕೊಂಡು ಸಂತೋಷ್‌ ಟೀಕೆ ವ್ಯಕ್ತಪಡಿಸಿದ್ದಾರೆ. ಆ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವವರು ಇದಕ್ಕೆ ಯಾಕೆ ನೀಡುತ್ತಿಲ್ಲ. ನಾಚಿಕೆಯಾಗಬೇಕು ಎಂದು ಟ್ವೀಟ್‌ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *