ದಿಢೀರ್ ಕೋಟ್ಯಧಿಪತಿಗಳಾದ್ರು ಅರುಣಾಚಲಪ್ರದೇಶದ ಗ್ರಾಮಸ್ಥರು!

ಗುವಾಹಟಿ: ಅಕ್ಟೋಬರ್ 20ಕ್ಕೂ ಮುನ್ನ ಸಾಮಾನ್ಯ ಪ್ರಜೆಗಳಾಗಿದ್ದ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತುಕ್ಬೆನ್ ಗ್ರಾಮದ ಜನರು ಕೋಟ್ಯಧಿಪತಿಗಳಾಗಿದ್ದಾರೆ.

ಹೌದು, ಈ ಸುದ್ದಿ ಕೇಳಿ ನೀವು ಅಶ್ಚರ್ಯಗೊಂಡರೂ ನಿಜ. ಐದು ದಶಕದ ಹಿಂದೆ ಗ್ರಾಮದ ಕೆಲ ನಿವಾಸಿಗಳ ಭೂ ಪ್ರದೇಶವನ್ನು ಭಾರತೀಯ ಸೇನೆ ತನ್ನ ವಶಕ್ಕೆ ಪಡೆದಿತ್ತು. ಈ ಭೂಮಿಗೆ ಸದ್ಯ ಸರ್ಕಾರ ಪರಿಹಾರ ಹಣ ನೀಡಿದ್ದು, ಗ್ರಾಮಸ್ಥರು ಕೋಟಿ ಕೋಟಿ ಹಣ ಪಡೆದಿದ್ದಾರೆ.

ಪಶ್ಚಿಮ ಕಮೆಂಗ್ ಜಿಲ್ಲೆಯ ತುಕ್ಪೆನ್, ಸಿಂಗ್ಚುಂಗ್ ಸೇರಿ ವಿವಿಧ ಹಳ್ಳಿಯ ಜನರಿಗೆ ಪರಿಹಾರ ಮೊತ್ತವನ್ನು ಅಲ್ಲಿನ ಸರ್ಕಾರ ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಸ್ತಾಂತರಿಸಿದೆ. ಪ್ರಮುಖವಾಗಿ ಗ್ರಾಮದ ಪ್ರೇಮ್ ದೊರ್ಜಿ ಎಂಬವರಿಗೆ 6.31 ಕೋಟಿ ರೂ. ಫನ್ಟೋ ಎಂಬವರು 6.21 ಕೋಟಿ ರೂ, ಹಾಗೂ ಖಂಡು ಅವರಿಗೆ 5.98 ಕೋಟಿ ರೂ. ಸಿಕ್ಕಿದೆ.

ಅರುಣಾಚಲ ಪ್ರದೇಶ ಸಿಎಂ ಪ್ರೇಮಾ ಖಾಂಡು, ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜೂಜು ಅವರು ಕಾರ್ಯಕ್ರದಲ್ಲಿ ಭಾಗವಹಿಸಿ ಪರಿಹಾರ ಮೊತ್ತವನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪ್ರಧಾನಿ ಮೋದಿ ಅವರ ಪ್ರೀತಿಯಿಂದ ಅರುಣಾಚಲಕ್ಕೆ ಹಲವು ವರ್ಷದ ಬಳಿಕ ಪರಿಹಾರ ಸಿಗಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮದ ಹಲವು ಮಂದಿಗೆ ಸರ್ಕಾರದ ಪರಿಹಾರ ಮೊತ್ತ ಸಿಕ್ಕಿದ್ದು, ಸಿಂಚಂಗ್‍ನಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು ಐದು ಗ್ರಾಮಸ್ಥರಿಗೆ 24.56 ಕೋಟಿ ರೂ. ನೀಡಲಾಗಿದೆ. ಅಲ್ಲದೇ ತುಕ್ಬೆನ್ ಗ್ರಾಮದ ಏಳು ನಿವಾಸಿಗಳಿಗೆ 13.17 ಕೋಟಿ ರೂ. ನೀಡಲಾಗಿದೆ ಎಂದು ಉಪ ಕಮಿಷನರ್ ಸೋನಾಲ್ ಸ್ವರೂಪ್ ತಿಳಿಸಿದ್ದಾರೆ.

1962 ರ ಭಾರತದ ಹಾಗೂ ಚೀನಾ ನಡುವೆ ಗಡಿ ವಿಚಾರವಾಗಿ ನಡೆದ ಯುದ್ಧದ ನಂತರ ಭಾರತೀಯ ಸೇನೆಯೂ ಅಲ್ಲಿನ ಪ್ರದೇಶಗಳ ಭೂಮಿಯನ್ನು ವಶಕ್ಕೆ ಪಡೆದು ಸೇನಾ ನೆಲೆ ನಿರ್ಮಾಣ ಮಾಡಿತ್ತು. ಆದರೆ ಅಲ್ಲಿನ ನಿವಾಸಿಗಳಿಗೆ ಅಂದು ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿರಲಿಲ್ಲ. ಹೀಗಾಗಿ 2017 ರ ಏಪ್ರಿಲ್‍ನಲ್ಲಿ ಪಶ್ಚಿಮ ಕಮೆಂಗ್ ಜಿಲ್ಲೆಯ ಮೂರು ಗ್ರಾಮಗಳ 152 ಕುಟುಂಬಗಳು ಕೇಂದ್ರಕ್ಕೆ ಮನವಿ ಸಲ್ಲಿದ್ದವು. ಇದರ ಪರಿಣಾಮವಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಗ್ರಾಮಗಳಿಗೆ 54 ಕೋಟಿ ರೂ. ಹಾಗೂ ಸೆಪ್ಟಂಬರ್ ನಲ್ಲಿ ಅರುಣಾಚಲ ಪ್ರದೇಶದ ಖಾಸಗಿ ಭೂಮಿ ಸ್ವಾಧೀನಕ್ಕೆ 158 ಕೋಟಿ ರೂ. ಅನ್ನು ನೀಡಿತ್ತು.

ಈ ವರ್ಷ ಫೆಬ್ರವರಿಯಲ್ಲಿ ತವಾಂಗ್ ಜಿಲ್ಲೆಯ ಬಾಮ್ಜಾ ಗ್ರಾಮದ 31 ಕುಟುಂಬಗಳಿಗೆ 40.80 ಕೋಟಿ ರೂ., 29 ಕುಟುಂಬಗಳಿಗೆ 1.09 ಕೋಟಿ ರೂ. ನೀಡಿದ್ದು, ಒಂದು ಕುಟುಂಬಕ್ಕೆ 6.73 ಕೋಟಿ ರೂ. ಮತ್ತು ಇನ್ನೊಬ್ಬರಿಗೆ 2.45 ಕೋಟಿ ರೂ. ಸಿಕ್ಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *