ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್‌ ಯೋಗಿರಾಜ್‌ ವಿವರಿಸಿದ್ದು ಹೀಗೆ

ಬೆಂಗಳೂರು: ಅಯೋಧ್ಯೆಯಿಂದ ಬುಧವಾರವಷ್ಟೇ ವಾಪಸ್‌ ಆಗಿರುವ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ರಾಮಲಲ್ಲಾ ಮೂರ್ತಿ ಕೆತ್ತಲು ತಾನು ಹೇಗೆ ಆಯ್ಕೆಯಾದೆ ಎಂಬುದರ ಕುರಿತು ವಿವರಿಸಿದ್ದಾರೆ.

ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್.‌ ಆರ್‌ ರಂಗನಾಥ್‌ (HR Ranganath) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅರುಣ್‌ ಅವರು, ತಾವು ಹೇಗೆ ಮೂರ್ತಿ ಕೆತ್ತನೆಗೆ ಆಯ್ಕೆಯಾಗಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಜನವರಿಯಲ್ಲಿ ಆಯ್ಕೆ ಪ್ರಕ್ರಿಯೆ ಶುರುವಾಯಿತು. ಇದರಲ್ಲಿ ನಮ್ಮ ಕರ್ನಾಟಕದ ಶಿಲ್ಪಿಗಳು ಇದ್ದರು. ಆದರೆ ನನಗೆ ಆಹ್ವಾನ ಬಂದಿರಲಿಲ್ಲ. ನಾನು ಈಗಾಗಲೇ ದೇಶಕ್ಕೆ 2 ಪ್ರಮುಖ ಪ್ರಾಜೆಕ್ಟ್‌ಗಳನ್ನು ಮಾಡಿದ್ದೇನೆ. ಕೇದಾರನಾಥದಲ್ಲಿ ಶಂಕರಾಚಾರ್ಯರದ್ದು, ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಅವರದ್ದು ಮಾಡಿದ್ದೀನಿ. ಆದರೂ ಯಾಕೆ ನನ್ನ ಯಾರೂ ಕರೀತಾ ಇಲ್ವಲ್ಲ ಎಂದು ಪ್ರಶ್ನೆ ಮಾಡಿಕೊಂಡೆ ಎಂದು ತಿಳಿಸಿದರು.

ನನ್ನ ಗೆಳೆಯರು ಕೂಡ ಅಯೋಧ್ಯೆಗೆ (Ayodhya Ram Mandir) ನನ್ನ ಕರೆದಿದ್ದರು, ಸಭೆ ಮುಗಿಸಿಕೊಂಡು ಬಂದೆ ಎಂದು ಹೇಳುತ್ತಿದ್ದರು. ಆಗ ನಾನು ಬಿಡು ದೇವರು ಎರಡು ಕೊಟ್ಟಿದ್ದಾನೆ, ಇನ್ನೂ ಎಲ್ಲಾ ನನಗೆ ಬೇಕು ಅಂತಾ ಇರಬಾರದು. ಇದು ದುರಾಸೆ ಆಗುತ್ತೆ ಎಂದು ಸುಮ್ನೆ ಮನೆಯಲ್ಲಿ ಕುಳಿತಿದ್ದೆ ಎಂದರು. ಇದನ್ನೂ ಓದಿ: ನಟ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗಿರಾಜ್

ಕಲಾವಿದರ ಮೂರ್ತಿಗಳು ಲಾಸ್ಟ್‌ಗೆ ಫೈನಲ್‌ ಆಗಬೇಕಿತ್ತು. ಆಗ ಅಲ್ಲಿ ಐಜಿಎನ್‌ಸಿಯಲ್ಲಿ ಸಚೀಂದರ್‌ ಜೋಶಿ ಎಂಬ ಚೇರ್‌ಮೆನ್‌ ಇದ್ದಾರೆ. ದೆಹಲಿಯಲ್ಲಿ ನಾನು ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಅವರ ಪರಿಚಯ ಇತ್ತು. ಅಲ್ಲದೆ ಬಂದು ನೋಡಿ ಏನು ಈ ಹುಡುಗ ಇಷ್ಟೊಂದು ಕಷ್ಟ ಪಡುತ್ತಿದ್ದಾನೆ ಅಲ್ವಾ ಎಂದು ಹೇಳುತ್ತಿದ್ದರು. ಹೀಗೆ ಅವರು ಸಭೆ ಮಾಡುತ್ತಿದ್ದಾಗ ಒಂದು ಒಂದು ದಿನ ಅರುಣ್‌ ಬಂದಿದ್ದಾರಾ ಎಂದು ಕೇಳಿದ್ದಾರೆ. ಆಗ ಅಲ್ಲಿದ್ದವರು ಇಲ್ಲ ಬಂದಿಲ್ಲ ಅಂತಾರೆ. ಬಳಿಕ ಅವರು ಮರುದಿನವೇ ನನ್ನನ್ನು ದೆಹಲಿಗೆ ಕರೆಸಿಕೊಳ್ಳುತ್ತಾರೆ ಎಂದು ಹೇಳಿದರು.

ನನ್ನ ಬೇಕುಂತಲೇ ಹೆಸರು ಬಿಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ ಅರುಣ್‌, ಹೇಳಿದರೆ ಇವನು ಮೂರು ಜನರಲ್ಲಿ ಆಯ್ಕೆ ಆಗಿ ಬಿಡಬಹುದು ಎಂದು ಹೇಳಿರಲ್ಲ ಅಂದ್ರು. ಆಮೇಲೆ ಏಪ್ರಿಲ್‌ನಲ್ಲಿ ನಾನು ಏನು ಕೆಲಸ ಮಾಡಿದ್ದೇನೆ ಅಂತಾ ಒಂದು ಪೆನ್‌ಡ್ರೈವ್‌ನಲ್ಲಿ ತೋರಿಸುತ್ತೇನೆ. ನೋಡಿ ಎಲ್ಲರಿಗೂ ಬಹಳ ಖುಷಿಯಾಗುತ್ತೆ. ಏಪ್ರಿಲ್‌ನಲ್ಲಿ ಮತ್ತೆ ನನಗೊಂದು ಪತ್ರ ಬರುತ್ತೆ. ಅದರಲ್ಲಿ ಕಲ್ಲು ಸೆಲೆಕ್ಟ್‌ ಮಾಡಲು ಅಯೋಧ್ಯೆಗೆ ಬನ್ನಿ ಎಂದು ತಿಳಿಸಲಾಗಿತ್ತು. ಹೀಗಾಗಿ ಹೋಗಿ ಕಲ್ಲು ಸೆಲೆಕ್ಟ್‌ ಮಾಡಿ ರಾಮಲಲ್ಲಾ ಮೂರ್ತಿ ನಿರ್ಮಾಣ ಮಾಡಿರುವುದಾಗಿ ಅರುಣ್‌ ಯೋಗಿರಾಜ್‌ ವಿವರಿಸಿದರು.