ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್

ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಕೌಟುಂಬಿಕ ಹಿಂಸೆ ಆರೋಪದ ಅಡಿ ಕೋಲ್ಕತ್ತಾ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅತ್ಯುತ್ತಮ ಪ್ರರ್ದಶ ನೀಡುತ್ತಿರುವ ಮೊಹಮ್ಮದ್ ಶಮಿ ಕೌಟುಂಬಿಕ ಕಲಹದಿಂದಾಗಿ ಮತ್ತೆ ಸಂಕಷ್ಟಕ್ಕೆ  ಸಿಲುಕಿದ್ದಾರೆ. ಶಮಿ 70 ಏಕದಿನ ಪಂದ್ಯಗಳನ್ನು ಆಡಿ 131 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ತಮ್ಮ 42ನೇ ಟೆಸ್ಟ್ ಪಂದ್ಯದಲ್ಲಿ 150 ವಿಕೆಟ್‍ಗಳ ಹೆಗ್ಗುರುತನ್ನು ತಲುಪಿದ್ದಾರೆ.

ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ಜಗಳ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ಕಾನೂನು ಹೋರಾಟ ನಡೆಸುತ್ತಿರುವ ಪತ್ನಿ ಇದೀಗ ಮೇಲುಗೈ ಸಾಧಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಕೋರ್ಟ್, ಮೊಹಮ್ಮದ್ ಶಮಿ ಸರೆಂಡರ್ ಆಗಲು ಅಥವಾ ಜಾಮೀನು ಪಡೆಯಲು ಕೇವಲ 15 ದಿನಗಳ ಕಾಲಾವಕಾಶ ನೀಡಿದೆ.

ಏನಿದು ಪ್ರಕರಣ?:
ಹಸೀನ್ ಜಹಾನ್ ಪತಿ ಮೊಹಮ್ಮದ್ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 7 ಲಕ್ಷ ರೂ. ಕೋರಿ ಮನವಿ ಸಲ್ಲಿಸಿದ್ದರು. ಜಹಾನ್ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಮಗಳ ಜೀವನಕ್ಕಾಗಿ 80 ಸಾವಿರ ರೂ. ನೀಡುವಂತೆ ತಿಳಿಸಿತ್ತು. ಹಸೀನ್ ಜಹಾನ್ ದೂರಿನ ಆಧಾರದ ಮೇಲೆ ಶಮಿ ಹಾಗೂ ಅವರ ಕುಟುಂಬ ಮೇಲೆ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 254ಎ (ಲೈಂಗಿಕ ದೌರ್ಜನ್ಯ) ಸೆಕ್ಷನ್ ಅಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

ಶಮಿ ಅವರ ವಿರುದ್ಧ ಪತ್ನಿ ಜಹಾನ್ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಮಾಡಿದ್ದರು. ಅಲ್ಲದೆ ಈ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಶಮಿ ಬೇರೆ ಬೇರೆ ಮಹಿಳೆಯರೊಂದಿಗೆ ಇದ್ದ ಫೋಟೋ ಹಾಗೂ ಚಾಟ್ ಮಾಡಿದ್ದ ಸ್ಕ್ರೀನ್ ಶಾಟ್ ಗಳನ್ನು ಪೋಸ್ಟ್ ಮಾಡಿದ್ದರು. ಅಲ್ಲದೆ ಸಹೋದರನೊಂದಿಗೆ ಸಂಬಂಧ ಹೊಂದುವಂತೆ ಶಮಿ ಒತ್ತಡ ಹಾಕಿದ್ದರು ಎಂದು ಜಹಾನ್ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಶಮಿ ನಿರಾಕರಿಸಿದ್ದರು.

Comments

Leave a Reply

Your email address will not be published. Required fields are marked *