ಲಕ್ನೋ ವಿರುದ್ಧ ಪಂದ್ಯಕ್ಕೂ ಮುನ್ನ ನಾಯಿಯಿಂದ ಕಚ್ಚಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಪುತ್ರ

ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ ಮಂಗಳವಾರ ನಡೆಯುತ್ತಿರುವ ನಿರ್ಣಾಯಕ ಪಂದ್ಯಕ್ಕೂ‌ ಮುನ್ನ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಯುವ ಆಲ್‌ರೌಂಡರ್‌ ಆಟಗಾರ ಅರ್ಜುನ್‌ ತೆಂಡೂಲ್ಕರ್‌ ನಾಯಿಯಿಂದ ಕಚ್ಚಿಸಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.

ಲಕ್ನೋ ತವರಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಲಕ್ನೋ ಆಟಗಾರ ಯುದ್ವೀರ್‌ ಸಿಂಗ್‌ ಅವರನ್ನ ಭೇಟಿಯಾದ ಅರ್ಜುನ್‌ ನಾಯಿ ಕಚ್ಚಿರುವುದಾಗಿ ತಾವೇ ಹೇಳಿಕೊಂಡಿದ್ದಾರೆ. ಯುದ್ವೀರ್‌, ಅರ್ಜುನ್‌ (Arjun Tendulkar) ಹೇಗಿದ್ದೀಯಾ? ಎಂದು ಕೇಳುತ್ತಿದ್ದಂತೆ ಸಚಿನ್‌ ತೆಂಡೂಲ್ಕರ್‌ ಪುತ್ರ ನಾಯಿ ಕಚ್ಚಿದೆ ಎಂದು ಹೇಳಿ ತಮ್ಮ ಕೈ ತೋರಿಸಿದ್ದಾರೆ. ಲಕ್ನೋ ಸೂಪರ್‌ ಜೈಂಟ್ಸ್‌ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತ ವೀಡಿಯೋವನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಪಾಂಡ್ಯ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದು ಏಕೆ? – ಗೊತ್ತಾದ್ರೆ ನೀವೂ ಬೇಷ್ ಅಂತೀರಾ

ಪಂಜಾಬ್‌ ಕಿಂಗ್ಸ್‌ ವಿರುದ್ಧ ಒಂದೇ ಓವರ್‌ನಲ್ಲಿ 31 ರನ್‌ ಚಚ್ಚಿಸಿಕೊಂಡು ಸುದ್ದಿಯಾಗಿದ್ದ ಅರ್ಜುನ್‌ ತೆಂಡೂಲ್ಕರ್‌ ಇದೀಗ ನಾಯಿಯಿಂದ ಕಚ್ಚಿಸಿಕೊಂಡಿರುವುದಾಗಿ ಹೇಳಿ ಸುದ್ದಿಯಾಗಿದ್ದಾರೆ. 5 ಬಾರಿ ಚಾಂಪಿಯನ್ಸ್‌ ಆಗಿರುವ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಈ ಸೀಸನ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್‌ ಕೆಲವು ಪಂದ್ಯಗಳನ್ನಾಡಿದ್ದಾರೆ. 4 ಪಂದ್ಯಗಳಲ್ಲಿ 30.66 ಸರಾಸರಿ ಹಾಗೂ 9.35 ಎಕಾನಮಿ ರೇಟ್‌ನಲ್ಲಿ 3 ವಿಕೆಟ್‌ ಪಡೆದಿದ್ದಾರೆ. ಈ ಋತುವಿನಲ್ಲಿ ಈವರೆಗೆ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದುಕೊಂಡಿದ್ದು, 13 ರನ್‌ ಗಳಿಸಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ ವಿಶ್ವವ್ಯಾಪಿಯಾಗಿಸಲು ಚಿಂತನೆ – ಬ್ರಿಜ್‌ ಭೂಷಣ್‌ ಬಂಧನಕ್ಕೆ ಮೇ 21 ಗಡುವು

ಮಂಗಳವಾರ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ನ ನಿರ್ಣಾಯಕ ಪಂದ್ಯ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್‌ ಜಯ ಸಾಧಿಸಿದರೆ ಪ್ಲೇ ಆಫ್‌ಗೆ ಬಹುತೇಕ ಅರ್ಹತೆ ಪಡೆದುಕೊಳ್ಳಲಿದೆ. ಆರಂಭದಲ್ಲಿ ರನ್‌ ಕದಿಯಲು ಪರದಾಡಿದ ಸೂರ್ಯಕುಮಾರ್‌ ಇದೀಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ, ಲಕ್ನೋ ಬೌಲಿಂಗ್‌ ಪಿಚ್‌ ಆಗಿರುವುದರಿಂದ ಯಾವ ತಂಡದ ಹಣೆಬರಹ ಹೇಗೆ ಅನ್ನೋದನ್ನ ಕಾದುನೋಡಬೇಕಿದೆ.