ಪ್ರತಿಪಕ್ಷದವರನ್ನು ಕೇಳಿ ಸಂಪುಟ ರಚಿಸಬೇಕಾ- ಬಿಎಸ್‍ವೈ ಗುಡುಗು

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಒನ್ ಮ್ಯಾನ್ ಶೋ ಎಂದು ಟೀಕಿಸಿದ ಬೆನ್ನಲ್ಲೇ ಮುಖ್ಯಮಂತ್ರಗಳು ಕೆಂಡಾಮಂಡಲರಾಗಿದ್ದು, ವಿರೋಧ ಪಕ್ಷದವರನ್ನು ಕೇಳಿ ಸಂಪುಟ ರಚಿಸಬೇಕೇ ಎಂದು ಕಿಡಿ ಕಾರಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆ ಮಾಡಲು ನಾನು 24 ಗಂಟೆಯೂ ಸಿದ್ಧನಿದ್ದೇನೆ. ಆದರೆ, ಕೇಂದ್ರದ ನಾಯಕರು ತೀರ್ಮಾನ ಮಾಡಬೇಕಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಹೀಗಾಗಿ ಪ್ರಧಾನಿ ಮೋದಿ ಹಾಗೂ ಹೈಕಮಾಂಡ್ ಜೊತೆ ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಸಂಪುಟ ರಚನೆಯಾದಲ್ಲಿ ನನಗೂ ಕೆಲಸ ಮಾಡಲು ಸುಲಭವಾಗಲಿದೆ. ಹೀಗಾಗಿಯೇ ಇಂದು ಉತ್ತರ ಕರ್ನಾಟಕದ ಪ್ರವಾಸ ಮುಗಿಸಿ ದೆಹಲಿಗೆ ತೆರಳುತ್ತಿದ್ದೇನೆ. ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ನೆರೆ ಹಾವಳಿ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದ್ದು, ವೈಮಾನಿಕ ಸಮೀಕ್ಷೆ ಮೂಲಕ ನೆರೆಯನ್ನು ಪ್ರತ್ಯಕ್ಷವಾಗಿ ನೋಡಲು ತೆರಳುತ್ತಿದ್ದೇನೆ. ಈಗಾಗಲೇ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಬೆಂಬಲಿಗರು ನೆಚ್ಚಿನ ಶಾಸಕನಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಮನವಿ ಮಾಡಿದರು. ರವೀಂದ್ರನಾಥ್ ಮೂರ್ನಾಲ್ಕು ಬಾರಿ ಜಯ ಗಳಿಸಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *