ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಮನವಿ – ಕೇಂದ್ರ ವಿಮಾನಯಾನ ಸಚಿವರೊಂದಿಗೆ ಎಂಬಿಪಿ ಮಾತುಕತೆ

ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ, ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭಕ್ಕೆ ಕೋರಿಕೆ

ಬೆಂಗಳೂರು: ಇಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತು, ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಒಪ್ಪಿಗೆ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಸೇರಿದಂತೆ ಕರ್ನಾಟಕದ ವೈಮಾನಿಕ ವಲಯದ ಹಲವು ಬೇಡಿಕೆಗಳೊಂದಿಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ (MB Patil) ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರೊಂದಿಗೆ ಮಾತುಕತೆ ನಡೆಸಿದರು.

ಕೇಂದ್ರ ಸಚಿವರನ್ನು ಭೇಟಿ ಮಾಡಿದ ಅವರು, ಬೆಂಗಳೂರಿನ ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಆಯ್ಕೆ ಮಾಡಿದ್ದ ಮೂರು ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಪರಿಶೀಲಿಸಿದೆ. ಹೀಗಾಗಿ ಒಂದು ಸ್ಥಳವನ್ನು ಆದಷ್ಟು ಶೀಘ್ರವೇ ಗುರುತು ಮಾಡಿದರೆ, ರಾಜ್ಯವು ಮುಂದಿನ ಕೆಲಸ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ಜೊತೆಗೆ, ವಿಜಯಪುರದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಿಮಾನ ನಿಲ್ದಾಣಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಬಾಕಿಯಿರುವ ಬಗ್ಗೆ ಚರ್ಚಿಸಿದರು.

ಮೈಸೂರು, ಶಿವಮೊಗ್ಗ, ಹಾಸನ, ಕಾರವಾರ, ರಾಯಚೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆಯೂ ಸುದೀರ್ಘವಾದ ಚರ್ಚೆ ನಡೆದಿದೆ.

ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್ ಮೇಲ್ದರ್ಜೆಗೇರಿಸಿ:
ಪ್ರಾದೇಶಿಕ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಈ ಭಾಗಗಳಿಗೆ ವಿಮಾನ ಸಂಪರ್ಕ ಸುಧಾರಣೆಯ ಅಗತ್ಯಗಳನ್ನು ಪರಿಗಣಿಸಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

ಎರಡೂ ವಿಮಾನ ನಿಲ್ದಾಣಗಳಲ್ಲಿ ಗಂಟೆಗೆ 2,400 ಪ್ರಯಾಣಿಕರನ್ನು ನಿರ್ವಹಿಸಬಲ್ಲ ಹೊಸ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಎ321 ದರ್ಜೆಯ ವಿಮಾನಗಳ ಕಾರ್ಯಾಚರಣೆ ಸಾಧ್ಯವಾಗುವಂತೆ 12 ಪಾರ್ಕಿಂಗ್ ವೇ ಅಭಿವೃದ್ಧಿಪಡಿಸಲಾಗುತ್ತಿದ್ದು, ರಾತ್ರಿ ವೇಳೆಯಲ್ಲೂ ಲ್ಯಾಂಡಿಂಗ್ ಆಗುವಂತೆ ಕ್ರಮ ವಹಿಸಲಾಗಿದೆ. ಜೊತೆಗೆ ಬೆಳಗಾವಿಯಿಂದ ಫೌಂಡ್ರಿ, ಏರೋಸ್ಪೇಸ್ ಸಾಧನಗಳು, ಅಲ್ಯುಮಿನಿಯಂ ಸಾಧನಗಳು, ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಪ್ರತ್ಯೇಕ ಟರ್ಮಿನಲ್ ಇದೆ. ಇದಲ್ಲದೆ ಬೆಳಗಾವಿಯಲ್ಲಿ 3 ವಿ.ವಿ,ಗಳು, 3 ಮೆಡಿಕಲ್ ಕಾಲೇಜುಗಳು, ಕೆಎಲ್‌ಇ ವಿವಿ ಎಲ್ಲವೂ ಇದ್ದು ವಿಶೇಷವಾಗಿ ಮಲೇಷ್ಯಾದಿಂದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಇನ್ನೊಂದೆಡೆ, ರಕ್ಷಣಾ ವಲಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಏರ್‌ಮೆನ್ ತರಬೇತಿ ಶಾಲೆ, ಕಮ್ಯಾಂಡೋ ತರಬೇತಿ ಕೇಂದ್ರ, ಜೂನಿಯರ್ ಲೀಡರ್ಸ್ ವಿಂಗ್, ಇನ್ಫೆಂಟ್ರಿ ಸ್ಕೂಲ್, ಮರಾಠಾ ಲಘು ಪದಾತಿ ದಳದ ಕೇಂದ್ರ ಮತ್ತು ಐಟಿಬಿಪಿ ತರಬೇತಿ ಕೇಂದ್ರಗಳಿವೆ. ಇವೆಲ್ಲವನ್ನೂ ಮೇಲ್ದರ್ಜೆಗೇರಿಸಲು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಮನದಟ್ಟು ಮಾಡಿಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಕೂಡ 16,900 ಚ.ಮೀ. ವಿಸ್ತೀರ್ಣದ ಹೊಸ ಟರ್ಮಿನಲ್ ನಿರ್ಮಿಸಲಾಗುತ್ತಿದ್ದು, ಎಬಿ320 ದರ್ಜೆಯ ವಿಮಾನಗಳ ನಿರ್ವಹಣೆ ಸಾಧ್ಯವಾಗುವಂತೆ ಮಾಡಲಾಗುತ್ತಿದೆ. ಇಲ್ಲಿರುವ ಕಾರ್ಗೋ ಟರ್ಮಿನಲ್‌ನಲ್ಲಿ ಈಗ ವಾರ್ಷಿಕ 15 ಟನ್ ಸರಕು ಸಾಗಣೆ ಆಗುತ್ತಿದೆ. ಜೊತೆಗೆ ವರ್ಷಕ್ಕೆ 3 ಲಕ್ಷ ಪ್ರಯಾಣಿಕರ ನಿರ್ವಹಣೆ ನಡೆಯುತ್ತಿದೆ. ಮೊದಲಿನಿಂದಲೂ ವಾಣಿಜ್ಯ ವಲಯವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಐಐಟಿ, ಐಐಐಟಿ ಸಂಸ್ಥೆಗಳು ಬಂದಿದ್ದು, ಕಿಮ್ಸ್ ಆಸ್ಪತ್ರೆ ಕೂಡ ಗಮನ ಸೆಳೆಯುತ್ತಿದೆ ಎಂದು ವಿವರಿಸಿದ್ದಾರೆ.

755 ಎಕರೆ ಇರುವ ಬೆಳಗಾವಿ ಏರ್‌ಪೋರ್ಟ್ 1990ರಿಂದ ಮತ್ತು 957 ಎಕರೆ ಇರುವ ಹುಬ್ಬಳ್ಳಿ ಏರ್‌ಪೋರ್ಟ್ 1980ರಿಂದ ಸಕ್ರಿಯವಾಗಿವೆ. ಇವುಗಳನ್ನು ಅಂತಾರಾಷ್ಟ್ರೀಯ ಮೇಲ್ದರ್ಜೆಗೆ ಏರಿಸಿದರೆ ಮಧ್ಯಪ್ರಾಚ್ಯ ದೇಶಗಳು, ಸಿಂಗಪುರ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಸುಗಮ ವಿಮಾನ ಸಂಚಾರ ಸಾಧ್ಯವಾಗಲಿದೆ. ಜೊತೆಗೆ ಇ-ಕಾಮರ್ಸ್ ಅಭಿವೃದ್ಧಿಯಾಗಲಿದ್ದು, ಉತ್ತರ ಕರ್ನಾಟಕದ ಈ ಎರಡೂ ನಗರಗಳು ಲಾಜಿಸ್ಟಿಕ್ಸ್ ಹಬ್ ಆಗಿ ಬೆಳವಣಿಗೆಯಾಗಲಿವೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ, ನಾಗರಿಕ ವಿಮಾನಯಾನ ವಲಯದಲ್ಲಿ ಕರ್ನಾಟಕ ರಾಜ್ಯವನ್ನು ಪಾಲುದಾರ ಎಂದು ಪರಿಗಣಿಸಬೇಕು. ಇದರಿಂದಾಗಿ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸುತ್ತಿರುವ ರಾಜ್ಯದ ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಂದ ರಾಜ್ಯಕ್ಕೂ ಲಾಭದ ಪಾಲು ಸಿಗಲಿದೆ. ಈ ವಿಷಯದಲ್ಲಿ ರಾಜ್ಯದ ಪಾತ್ರವನ್ನು ಕೇವಲ ಭೂಸ್ವಾಧೀನ ಮತ್ತು ಸೌಕರ್ಯಗಳ ಅಭಿವೃದ್ಧಿಗೆ ಮಾತ್ರ ಸೀಮಿತಗೊಳಿಸಬಾರದು. ಜೊತೆಗೆ ನಾಗರಿಕ ವಿಮಾನಯಾನ ವಲಯದಲ್ಲಿನ ಆಸ್ತಿ ನಗದೀಕರಣ ಯೋಜನೆಯಲ್ಲೂ ರಾಜ್ಯವನ್ನು ಪಾಲುದಾರ ಎಂದು ಗುರುತಿಸಬೇಕು. 2021ರಲ್ಲಿ ಖಾಸಗೀಕರಣಕ್ಕೆಂದು ಗುರುತಿಸಿದ ದೇಶದ 13 ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಕೂಡ ಒಂದಾಗಿದೆ. ಆದರೆ, ಆ ಯೋಜನೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾವ ಪ್ರಗತಿಯೂ ಕಂಡುಬಂದಿಲ್ಲ ಎಂದು ಆಗ್ರಹಿಸಿದ್ದಾರೆ.